ADVERTISEMENT

ಸಾಕ್ಷ್ಯನಾಶಪಡಿಸಿದ ಸಿಬ್ಬಂದಿಗೆ ಶೋಧ

ವಿಬ್ಗಯೊರ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 25 ಜುಲೈ 2014, 19:28 IST
Last Updated 25 ಜುಲೈ 2014, 19:28 IST

ಬೆಂಗಳೂರು: ವಿಬ್ಗಯೊರ್ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕ­ರಣದ ತನಿಖೆಯನ್ನು ಚುರುಕು­ಗೊಳಿ­ಸಿರುವ ಸಿಸಿಬಿ ಅಧಿಕಾರಿಗಳು, ಘಟನಾ ದಿನ ಆಕೆಯನ್ನು ಮೊದಲು ಉಪಚರಿ­ಸಿದ್ದ ಆಡಳಿತ ಮಂಡಳಿಯ ಸಿಬ್ಬಂದಿ ಮತ್ತು ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರ ಪತ್ತೆ ಕಾರ್ಯ ಆರಂಭಿಸಿದ್ದಾರೆ.

‘ತರಗತಿ ಅವಧಿಯಲ್ಲಿ ಮಕ್ಕಳ ಆರೋಗ್ಯ­ದಲ್ಲಿ  ಏರುಪೇರಾದರೆ, ಆಡ­ಳಿತ ಮಂಡಳಿ ಸಿಬ್ಬಂದಿ ಸ್ಥಳೀಯ ವೈದ್ಯ­ರನ್ನು ಕರೆಸಿ ಚಿಕಿತ್ಸೆ ಕೊಡಿಸುತ್ತಾರೆ. ಅವರನ್ನು ‘ಅತಿಥಿ ವೈದ್ಯರು’ ಎಂದು ಕರೆಯಲಾಗುತ್ತದೆ. ಜುಲೈ 2ರಂದು ಅತ್ಯಾಚಾರ ನಡೆದಾಗ ವಿದ್ಯಾರ್ಥಿನಿ­ಯನ್ನು ಮೊದಲು ಉಪಚರಿಸಿದ ಸಿಬ್ಬಂದಿ ಮತ್ತು ಚಿಕಿತ್ಸೆ ನೀಡಿದ ವೈದ್ಯರೇ ಸಾಕ್ಷ್ಯ ನಾಶ ಪಡಿಸಿರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೂರಿನಲ್ಲಿ ಗೊಂದಲ: ಶಾಲೆಯ ಅಧ್ಯಕ್ಷ ರುಸ್ತುಂ ಕೇರವಾಲ ಅವರನ್ನು ಬಂಧಿಸಿದ ನಂತರ ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಅವರು, ‘ರುಸ್ತುಂ ವಿರುದ್ಧ ಬಾಲ ನ್ಯಾಯ ಕಾಯ್ದೆ, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಸಾಕ್ಷ್ಯ ನಾಶ (ಐಪಿಸಿ 201) ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದರು. ಆದರೆ, ಸಾಕ್ಷ್ಯನಾಶ ಆರೋಪಕ್ಕೆ ಬದಲಾಗಿ ಉದ್ದೇಶ­ಪೂರ್ವಕ­ವಾಗಿ ಪ್ರಕರಣವನ್ನು ಮುಚ್ಚಿಟ್ಟ (ಐಪಿಸಿ 202) ಆರೋಪದಡಿ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಐಪಿಸಿ 201ರಲ್ಲಿ ಆರೋಪ ಸಾಬೀತಾದರೆ ಅಪರಾಧಿಗೆ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆಯಾಗುತ್ತದೆ. ಆದರೆ, ಐಪಿಸಿ 202ರಲ್ಲಿ ಅಪರಾಧಿಗೆ ಆರು ತಿಂಗಳು ಮಾತ್ರ ಶಿಕ್ಷೆಯಾಗುತ್ತದೆ. ಈ ಎರಡೂ ಪ್ರಕರಣಗಳಲ್ಲೂ ಜಾಮೀನು ಸಿಗುತ್ತದೆ. ಆದರೆ, ಪೊಲೀಸರು ಶಿಕ್ಷೆ ಪ್ರಮಾಣ ಕಡಿಮೆ ಮಾಡುವ ದುರು­ದ್ದೇಶದಿಂದ ರುಸ್ತುಂ ವಿರುದ್ಧ ಐಪಿಸಿ 202ರ ಅಡಿ ಪ್ರಕರಣ ದಾಖಲಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತ­ನಾಡಿದ ಎಂ.ಎನ್.ರೆಡ್ಡಿ, ‘ಆರಂಭದಲ್ಲಿ ರುಸ್ತುಂ ವಿರುದ್ಧ ಐಪಿಸಿ 201ರ ಅಡಿ ಪ್ರಕರಣ ದಾಖಲಿಸುವ ಚಿಂತನೆ ಇತ್ತು. ಆದರೆ, ಹೆಚ್ಚಿನ ತನಿಖೆ ನಂತರ ಐಪಿಸಿ 202ರಡಿ ಪ್ರಕರಣ ದಾಖ­ಲಿಸು­ವುದು ಸೂಕ್ತ ಎನಿಸಿತು. ಹೀಗಾಗಿ ಅದೇ ಆರೋಪದಡಿ ಕ್ರಮ ಕೈಗೊಳ್ಳಲಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.