ADVERTISEMENT

ಸಾರಕ್ಕಿ ಕೆರೆ: ತ್ಯಾಜ್ಯದ ಗೋಳಿಗೆ ಸದ್ಯಕ್ಕಿಲ್ಲ ಮುಕ್ತಿ

ಜರಗನಹಳ್ಳಿ ಸರ್ವೆ ಸಂಖ್ಯೆ 7ರಲ್ಲಿ 38 ಎಕರೆ 14 ಗುಂಟೆ * ಪುಟ್ಟೇನಹಳ್ಳಿ ಸರ್ವೆ ಸಂಖ್ಯೆ 5ರಲ್ಲಿ 6 ಎಕರೆ 10 ಗುಂಟೆ * ಸಾರಕ್ಕಿ ಸರ್ವೆ ಸಂಖ್ಯೆ 26ರಲ್ಲಿ 38 ಎಕರೆ

ಮಂಜುನಾಥ್ ಹೆಬ್ಬಾರ್‌
Published 26 ಮೇ 2015, 19:45 IST
Last Updated 26 ಮೇ 2015, 19:45 IST

ಬೆಂಗಳೂರು: ಕೆರೆಯೊಳಗೆ ಕಳೆ ಗಿಡಗಳದ್ದೇ ಸಾಮ್ರಾಜ್ಯ, ಕೆಂಬಣ್ಣಕ್ಕೆ ತಿರುಗಿರುವ ನೀರು, ಅಲ್ಲಲ್ಲಿ ಮಾಂಸದ ತ್ಯಾಜ್ಯ, ಪ್ಲಾಸ್ಟಿಕ್‌ ಚಪ್ಪಲಿ ಹಾಗೂ ಕಟ್ಟಡಗಳ ಅವಶೇಷ. ಜೊತೆಗೆ ಹಂದಿಗಳ ರಗಳೆ, ಊರಿಡೀ ಸೊಳ್ಳೆ ಕಾಟ.
ಇದು ನಗರದ ಮಧ್ಯಭಾಗದಲ್ಲಿರುವ ಸಾರಕ್ಕಿ ಕೆರೆಯ ದುಸ್ಥಿತಿ. ಸಾರಕ್ಕಿ ಕೆರೆಯ ಒತ್ತುವರಿಯನ್ನು ನಗರ ಜಿಲ್ಲಾಡಳಿತ ತೆರವುಗೊಳಿಸಿ ಒಂದು ತಿಂಗಳು ಕಳೆದಿದೆ. ಕೆಲವು ಕಡೆಗಳಲ್ಲಿ ಕಟ್ಟಡದ ಅವಶೇಷಗಳು ಹಾಗೆಯೇ ರಾಶಿ ಬಿದ್ದಿವೆ. ಆ ಬಳಿಕ ಕೆರೆಯ ಸುತ್ತ ಅಲ್ಲಲ್ಲಿ ಕಾಟಾಚಾರದ ತಂತಿ ಬೇಲಿ ನಿರ್ಮಾಣ ಕಾರ್ಯ ನಡೆದಿದೆ. ಉಳಿದಂತೆ  ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ.

ಕೆರೆ ತನ್ನ ಒಡಲೊಳಗೆ ಕಶ್ಮಲದ ಪಿಡುಗನ್ನು ಇಟ್ಟುಕೊಂಡು ವಿಷ ಕಾರುತ್ತಿದೆ. ಎಲ್ಲೆಡೆ ಘನತ್ಯಾಜ್ಯ ತುಂಬಿದ್ದು ಜೊಂಡು ಬೆಳೆದಿರುವುದರಿಂದ ನೀರಿದೆ ಎಂಬುದೇ ಗೊತ್ತಾಗು­ವುದಿಲ್ಲ. ದುರ್ನಾತ ಬೀರುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

‘ಸಾರಕ್ಕಿ ಕೆರೆಗೆ ಪ್ರತಿನಿತ್ಯ ಸುಮಾರು 10 ಲಕ್ಷ ಲೀಟರ್‌ ಕೊಳಚೆ ನೀರು ಕೆರೆ ಸೇರುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಕೊಳವೆ ಬಾವಿಗಳಲ್ಲಿಯೂ ಕೆರೆ­ಯಲ್ಲಿರುವಂಥ ಬಣ್ಣದ ನೀರು ಬರುತ್ತಿದೆ’ ಎಂದು ಸ್ಥಳೀಯ ನಿವಾಸಿ ಶ್ಯಾಮ್‌ ದೂರಿದರು.

‘ಸುತ್ತಮುತ್ತ ತಲೆ ಎತ್ತಿರುವ ಅಪಾರ್ಟ್‌­ಮೆಂಟ್‌­ಗಳಿಂದ ಕೊಳಚೆ ನೀರು ನೇರವಾಗಿ ಕೆರೆ ಸೇರುತ್ತಿದೆ. ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಕೆರೆ ಅಂಗಳದಲ್ಲಿ ಜಲಮಂಡಳಿಯ ಕೊಳಚೆ ನೀರು ಶುದ್ಧೀಕರಣ ಘಟಕದ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಈ ಘಟಕವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಬೇಕು ಹಾಗೂ ಕೆರೆಯ ನೀರನ್ನು ಶುದ್ಧಗೊಳಿಸಬೇಕು’ ಎಂದು ಸಲಹೆ ನೀಡುತ್ತಾರೆ ವಾಸುದೇವನ್‌.

ಕುಗ್ಗಿದ ಕೆರೆ ಗಾತ್ರ: ‘30–40 ವರ್ಷಗಳಿಂದ ಕೆರೆಯ ಒತ್ತುವರಿ ನಿರಂತರವಾಗಿ ನಡೆದಿದೆ. ದಶಕಗಳ ಹಿಂದೆಯೇ ಕೆರೆಯೊಳಗೆ ಬಿಬಿಎಂಪಿ ರಸ್ತೆ ನಿರ್ಮಿಸಿದೆ. ಆ ಬಳಿಕವೇ ಒತ್ತುವರಿ ಶರವೇಗದಲ್ಲಿ ನಡೆಯಿತು. 2000ನೇ ಇಸವಿಯ ನಂತರ ಸುತ್ತಮುತ್ತ ಬಹುಮಹಡಿ ಕಟ್ಟಡಗಳು ತಲೆ ಎತ್ತಿದವು.   ಇದರಿಂದಾಗಿ ಕೆರೆ ಕಲುಷಿತಗೊಳ್ಳುತ್ತಾ ಬಂತು. ಕೆರೆ ತ್ಯಾಜ್ಯದ ಗುಂಡಿಯಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ ಸ್ಥಳೀಯ ನಿವಾಸಿ ವಿನಯ್‌ ಚಂದ್ರ.

‘ಜಿಲ್ಲಾಡಳಿತ 1993ರಲ್ಲಿ ಸಮೀಕ್ಷೆ ನಡೆಸಿದಾಗ ಸಾರಕ್ಕಿ ಕೆರೆಯ ವಿಸ್ತೀರ್ಣ 78.24 ಎಕರೆ ಇತ್ತು. 2001ರಲ್ಲಿ ವಿಸ್ತೀರ್ಣ 74 ಎಕರೆಗೆ ಇಳಿದಿತ್ತು. 2013ರಲ್ಲಿ ಸಮೀಕ್ಷೆ ನಡೆಸಿದಾಗ ಕೆರೆಯ ವಿಸ್ತೀರ್ಣ 40 ಎಕರೆಗೆ ಕುಸಿದಿತ್ತು. ಒಂದೆರಡು ವರ್ಷಗಳಿಂದ ಕೆರೆಯ ದಂಡೆಯ ಮೇಲೆ ಮಣ್ಣು ಸುರಿದು ಮುಚ್ಚಲಾಗುತ್ತಿದೆ. ಸಂರಕ್ಷಣಾ ಕಾರ್ಯ ಹಾಗೂ ಅಭಿವೃದ್ಧಿ ಕಾರ್ಯ ಸಮರ್ಪಕವಾಗಿ ನಡೆಯದಿದ್ದರೆ ಕೆಲವೇ ವರ್ಷಗಳಲ್ಲಿ ಆ ಜಾಗಗಳಲ್ಲೂ ಮನೆಗಳು ತಲೆ ಎತ್ತಲಿವೆ’ ಎಂದು ಅವರು ಎಚ್ಚರಿಸುತ್ತಾರೆ.

‘ಸುತ್ತಮುತ್ತಲಿನ ಕಟ್ಟಡಗಳಿಂದ ಕೆರೆಗೆ ಕೊಳಚೆ ನೀರು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳನ್ನು ಕೆರೆಗೆ ಸುರಿಯುವವರ ಮೇಲೆ ದಂಡ ವಿಧಿಸಬೇಕು. ಕೆರೆಯೊಳಗೆ ನಿರ್ಮಿಸಿರುವ ಕಾಲುದಾರಿಯನ್ನು ಮುಚ್ಚಬೇಕು. ಭವಿಷ್ಯದಲ್ಲಿ ಒತ್ತುವರಿಯಾಗದಂತೆ ಕ್ರಮ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಾರಕ್ಕಿ ಕೆರೆ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳು ಆಗ್ರಹಿಸುತ್ತಾರೆ.

‘ಒತ್ತುವರಿ ತೆರವು ಮಾಡಿದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಕೆರೆಗೆ ನೀರು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು. ಸರ್ಕಾರಿ ಸಂಸ್ಥೆಗಳೇ ಮಾಡುವ ಹೊಣೆಗೇಡಿ ಕೆಲಸಗಳಿಗೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯ ನಿವಾಸಿ ಮೋಹನ್‌ ಒತ್ತಾಯಿಸುತ್ತಾರೆ.

‘ಕೆರೆಯ ಬಹುತೇಕ ಒತ್ತುವರಿಯನ್ನು ತೆರವು ಮಾಡಲಾಗಿದೆ. ಸುಮಾರು 15 ಕಟ್ಟಡಗಳ ತೆರವಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಪೂರಕ ದಾಖಲೆಗಳನ್ನು ಸಲ್ಲಿಸಿ ತಡೆಯಾಜ್ಞೆ ತೆರವುಗೊಳಿಸುವ ಕಾರ್ಯ ನಡೆದಿದೆ. ಒತ್ತುವರಿ ತೆರವು ಮಾಡಿ ಬಿಡಿಎ ವಶಕ್ಕೆ ಒಪ್ಪಿಸಲಾಗಿದೆ. ಕೆರೆಯ ಅಭಿವೃದ್ಧಿಯನ್ನು ಬಿಡಿಎ ಮಾಡಬೇಕಿದೆ’ ಎಂದು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಮಾಹಿತಿ ನೀಡುತ್ತಾರೆ.

ಸಾರಕ್ಕಿ ಸಂತ್ರಸ್ತರಿಗೆ ಪುನರ್ವಸತಿ
ಸಾರಕ್ಕಿ ಕೆರೆ ಒತ್ತುವರಿ ತೆರವಿನಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಕೆರೆಯ ಒತ್ತುವರಿ ತೆರವಿನ ಅಮಾಯಕ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಮೈಲಸಂದ್ರದಲ್ಲಿ 10 ಎಕರೆ ಜಾಗವನ್ನು ಗುರುತಿಸಲಾಗಿದೆ. ಇಲ್ಲಿ ಸಿಂಗಲ್‌ ಬೆಡ್‌ ರೂಮಿನ ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಾರಕ್ಕಿ ಕೆರೆ ಅಂಗಳದಲ್ಲಿ 178 ಮನೆಗಳು ಇದ್ದವು. ಈ ಪೈಕಿ 30 ಮನೆಗಳನ್ನು ಸಂಪೂರ್ಣ ನೆಲಸಮ ಮಾಡಲಾಗಿದೆ. ಇದರಲ್ಲಿ ಮೂರು ಕಡು ಬಡ ಕುಟುಂಬಗಳು ಹಾಗೂ 30 ಬಡ ಕುಟುಂಬಗಳು ಸೇರಿವೆ. 30 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು. 5 ಅಡಿ, 10 ಅಡಿ ಒತ್ತುವರಿದಾರ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲ. ಇವರಲ್ಲಿ ಸಾಕಷ್ಟು ಅನುಕೂಲಸ್ಥರು ಇದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

₹ 14 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
ಸಾರಕ್ಕಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯೋಜನೆ ರೂಪಿಸಿದೆ.

ಕೆರೆಯ ಅಂತರ್ಜಲ ವೃದ್ಧಿಸಿ ಪರಿಸರ ಸಂರಕ್ಷಣೆ ಮಾಡುವುದು ಬಿಡಿಎ ಉದ್ದೇಶ. ಇದಕ್ಕಾಗಿ ನೀಲನಕ್ಷೆ ಸಿದ್ಧಪಡಿಸಿದೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕೆರೆಯ ಸುತ್ತ ತಂತಿ ಬೇಲಿ ನಿರ್ಮಾಣ,  ಕೆರೆ ಸುತ್ತ ನಡಿಗೆ ಪಥ, ಮಕ್ಕಳಿಗೆ ಆಟದ ಮೈದಾನ, ಕಿರು ಉದ್ಯಾನ, ಕೆರೆ ಮಧ್ಯೆ ದ್ವೀಪ ನಿರ್ಮಾಣ ಮಾಡಲಾಗುವುದು ಎಂದು ಬಿಡಿಎ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.