ADVERTISEMENT

ಸಾವಯವ ತೋಟದ ಸೋಗಿನಲ್ಲಿ ವಾಣಿಜ್ಯ ಚಟುವಟಿಕೆ

ಕಾವೇರಿ ವನ್ಯಧಾಮ: ವಾಣಿಜ್ಯ ಚಟುವಟಿಕೆಗೆ ಆಸ್ಪದ ಬೇಡ– ಪರಿಸರ ಪ್ರಿಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:54 IST
Last Updated 26 ಸೆಪ್ಟೆಂಬರ್ 2016, 19:54 IST
ವೂಡೀಸ್‌ನ ಸಾವಯವ ಪ್ರವೇಶ ದ್ವಾರ
ವೂಡೀಸ್‌ನ ಸಾವಯವ ಪ್ರವೇಶ ದ್ವಾರ   

ಬೆಂಗಳೂರು: ‘ಕಾವೇರಿ ವನ್ಯಜೀವಿಧಾಮದ ಅಂಚಿನಲ್ಲಿ ವೂಡೀಸ್ ಸಾವಯವ ತೋಟ ಹೆಸರಿನಲ್ಲಿ  ರೆಸಾರ್ಟ್ ತಲೆ ಎತ್ತುತ್ತಿದೆ. ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದೊಳಗೆ ಸಮುದಾಯ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಇದರಿಂದ ವನ್ಯಜೀವಿಧಾಮಕ್ಕೆ ಅಪಾಯ ಎದುರಾಗಲಿದೆ’ ಎಂದು ವನ್ಯಜೀವಿ ಪ್ರೇಮಿಗಳು ಆರೋಪಿಸಿದ್ದಾರೆ.

ಗಾಯದ ಮೇಲೆ ಬರೆ: ‘ಜೀವ ವೈವಿಧ್ಯಕ್ಕೆ ಹೆಸರಾಗಿರುವ ಕಾವೇರಿ ವನ್ಯಜೀವಿಧಾಮವು ಈಗಾಗಲೇ ಅನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಯಿಂದ ಬಳಲುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ,  ಬೆಂಗಳೂರು ಮೂಲದ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು   ಕೊಳ್ಳೆಗಾಲ ತಾಲ್ಲೂಕಿನ ಪ್ರಕಾಶಪಾಳ್ಯದ ಬಳಿ ಪರಿಸರ ಸೂಕ್ಷ್ಮ ವಲಯದೊಳಗೆ ಸುಮಾರು 100 ಎಕರೆ ಪ್ರದೇಶದಲ್ಲಿ ವೂಡೀಸ್‌ ಯೋಜನೆ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ. ಇದರಿಂದ  ವನ್ಯಜೀವಿಧಾಮಕ್ಕೆ ಹೊಸ ಆತಂಕ ಬಂದೊದಗಿದೆ’ ಎಂದು ಅವರು ದೂರಿದ್ದಾರೆ. 

‘ವೂಡೀಸ್ ಸಾವಯವ ಫಾರ್ಮ್‌ ಒಳಗೆ ಕಟ್ಟಡಗಳು, ಮನೋರಂಜನೆ  ಚಟುವಟಿಕೆಗಾಗಿ ಕ್ಲಬ್ ಹೌಸ್, ಆಟದ ಮೈದಾನ, ಈಜುಕೊಳ ಹಾಗೂ  ಕಾಟೇಜ್‌ಗಳನ್ನು ನಿರ್ಮಿಸಲಾಗುತ್ತಿದೆ. ಸಾವಯವ ಕೃಷಿ ಚಟುವಟಿಕೆಯ ಸೋಗಿನಲ್ಲಿ  ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದೊಳಗೆ ನಡೆಯುವ ವಾಣಿಜ್ಯ ಚಟುವಟಿಕೆಗೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು’ ಎಂದು  ಅವರು ಒತ್ತಾಯಿಸಿದ್ದಾರೆ.

ಭೂಪರಿವರ್ತನೆಯನ್ನೂ ಮಾಡಿಸಿಲ್ಲ: ‘ವನ್ಯಜೀವಿ ಧಾಮದ ಆಸುಪಾಸಿನಲ್ಲಿ ಇಂತಹ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಇಲ್ಲಿ ಕಟ್ಟಡ ನಿರ್ಮಿಸಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಹಾಗೂ ರಾಜ್ಯದ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ  ಅಗತ್ಯ. ಆದರೆ, ಅನುಮತಿ ಇಲ್ಲದೆಯೇ ಇಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಿಸಲು  ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ  ಮಾಡಿಸಿಲ್ಲ.  ಈ ನಡುವೆ, ಈ ಯೋಜನೆಯ ಬಗ್ಗೆ ಪ್ರಚಾರವನ್ನೂ ಮಾಡಲಾಗುತ್ತಿದೆ’ ಎಂದು ಅವರು ದೂರಿದರು.

‘ಈ ಯೋಜನೆ ಕುರಿತ ವೆಬ್‌ಸೈಟ್ ನಲ್ಲಿ ಸಾವಯವ ಕೃಷಿ ಕುರಿತು ಕೆಲವು ಸಾಲುಗಳ ಮಾಹಿತಿ ಮಾತ್ರ ಇದೆ.  ಇಲ್ಲಿನ ಇತರ ಸೌಲಭ್ಯಗಳ ಬಗ್ಗೆ ಹಾಗೂ ಮನರಂಜನೆ ಚಟುವಟಿಕೆ ಬಗ್ಗೆಯೇ ಹೆಚ್ಚಿನ ವಿವರಗಳಿವೆ. ಇಲ್ಲಿಗೆ ಭೇಟಿ ನೀಡುವವರು ಮನರಂಜನೆ ಜೊತೆ ಈ ಸೌಲಭ್ಯಗಳ ಪ್ರಯೋಜನ ಪಡೆಯಬಹುದು ಎಂದೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರು’ ಎಂದು ಅವರು ತಿಳಿಸಿದರು. ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ವೆಬ್‌ಸೈಟ್‌ ಸಂಪರ್ಕವನ್ನು ತೆಗೆದುಹಾಕಲಾಗಿದೆ. 

‘ಪರಿಸರ ಸೂಕ್ಷ್ಮ ವಲಯದ ಚಟುವಟಿಕೆ ಕುರಿತು 2011ರಲ್ಲಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಮಾರ್ಗಸೂಚಿಯನ್ನು ಹೊರಡಿಸಿದೆ.  ಇದರನ್ವಯ, ಇಂತಹ ಪ್ರದೇಶದಲ್ಲಿ ಹೊಸ ಹೋಟೆಲ್, ರೆಸಾರ್ಟ್‌ ಹಾಗೂ ವಸತಿ ಕಟ್ಟಡ ನಿರ್ಮಿಸುವುದನ್ನೂ ನಿಷೇಧಿಸಲಾಗಿದೆ.   ವನ್ಯಜೀವಿಗಳ ಆವಾಸಸ್ಥಾನದ ಉಳಿವು ಹಾಗೂ ಅವುಗಳ ಒಡಾಟಕ್ಕೆ ಅಡಚಣೆ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ಅವರು ತಿಳಿಸಿದರು.

ವನ್ಯಜೀವಿಧಾಮದ ನೀರಿನ ಗುಂಡಿಯಿಂದ ಕೇವಲ 200 ಮಿಟರ್ ದೂರದಲ್ಲಿ ವೂಡೀಸ್‌ ಯೋಜನೆ ಜಾರಿಯಾಗುತ್ತಿದೆ.  ನೀರನ್ನು ಅರಸಿ ಬರುವ ವನ್ಯಜೀವಿಗಳ ಪಾಲಿಗೆ ಇದರಿಂದ ಅಡ್ಡಿ ಉಂಟಾಗಲಿದೆ.  ಈ ಯೋಜನೆಯ ಸ್ಥಳದಲ್ಲೇ ಹಾದುಹೋಗುವ ಕಬಿನಿ ನಾಲೆಯ ನೀರಿನ ದುರ್ಬಳಕೆಯಾಗುವ ಆತಂಕವಿದೆ.  ಪ್ರವಾಸಿಗರ ಅನುಕೂಲಕ್ಕಾಗಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪರಿಸರ ಸೂಕ್ಷ್ಮ ವಲಯದೊಳಗಿರುವ  ಮಣ್ಣಿನ ರಸ್ತೆಗೆ ಡಾಂಬರೀಕರಣ ನಡೆಸಲೂ  ಸಿದ್ಧತೆ ನಡೆದಿದೆ’  ತಿಳಿಸಿದರು.

‘ಮಾನವ ಚಟುವಟಿಕೆ ವನ್ಯಜೀವಿಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.  ಇದರಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುವ ಅಪಾಯವಿದೆ.   ಕಾಡ್ಗಿಚ್ಚು, ಕಳ್ಳಬೇಟೆ ಸಮಸ್ಯೆಗಳಿಂದ ಬಳಲುತ್ತಿರುವ ವನ್ಯಜೀವಿಗಳ ಪಾಲಿಗೆ ಇಂತಹ ಯೋಜನೆಗಳು ಮಾರಕವಾಗಲಿವೆ’ ಎಂದು ಅವರು ಎಚ್ಚರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗೆ ಹಲವು ಸಲ ರೆಸಾರ್ಟ್‌ನ ಆಡಳಿತ ವರ್ಗಕ್ಕೆ ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

‘ತೆರವಿಗೆ ಸೂಚನೆ ನೀಡಿದ್ದೇವೆ’
‘ವನ್ಯಜೀವಿ ಧಾಮದ ಅಂಚಿನಲ್ಲಿ ವುಡ್ಡೀಸ್‌ ಸಾವಯವ ತೋಟ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ ನಡೆಯುತ್ತಿರುವ  ಕುರಿತು ಮಾಹಿತಿ ಬಂದಿತ್ತು. ತಿಂಗಳ ಹಿಂದೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.   ವಾಣಿಜ್ಯ ಚಟುವಟಿಕೆ ನಡೆಸದಂತೆ ಮಾಲೀಕರಿಗೆ ಸೂಚನೆ ನೀಡಿದ್ದೇನೆ’ ಎಂದು ಕಾವೇರಿ ವನ್ಯಜೀವಿ ಧಾಮದ ಉಪ ಅರಣ್ಯಸಂರಕ್ಷಣಾಧಿಕಾರಿ ರಮೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನುಮತಿ ಪಡೆಯದೆಯೇ ಕಟ್ಟಡ ನಿರ್ಮಿಸಿದ ಬಗ್ಗೆ ಮಾಲೀಕರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದೇವೆ. ಫಾರ್ಮ್‌ನ ಸುತ್ತ  ನಿರ್ಮಿಸಿರುವ ಆವರಣ ಗೋಡೆ, ಬ್ಯಾಸ್ಕೆಟ್‌ಬಾಲ್‌ ಅಂಕಣ, ಈಜುಕೊಳ ತೆರವುಗೊಳಿಸಲು ಹಾಗೂ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಲು ಸೂಚಿಸಿದ್ದೇವೆ. ಇದಕ್ಕೆ ಮಾಲೀಕರೂ ಒಪ್ಪಿದ್ದಾರೆ’ ಎಂದರು.

‘ಈ ಪ್ರದೇಶದಲ್ಲಿ ಆನೆಗಳ ಓಡಾಟ ಇದೆ. ರಾತ್ರಿವೇಳೆ ವಿದ್ಯುದ್ದೀಪ ಉರಿಸುವುದನ್ನು ಪ್ರಾಣಿಗಳು ಇಷ್ಟಪಡುವುದಿಲ್ಲ. ಆವರಣಗೋಡೆ ಹಾಗೂ ಬೇಲಿ ನಿರ್ಮಿಸುವುದರಿಂದ ಪ್ರಾಣಿಗಳ ಸಹಜ ಓಡಾಟಕ್ಕೂ ಅಡ್ಡಿ ಆಗಲಿದೆ’ ಎಂದು ಅವರು ತಿಳಿಸಿದರು.

ಮುಖ್ಯಾಂಶಗಳು
* ವೂಡೀಸ್‌ ತೋಟದಲ್ಲಿ ರೆಸಾರ್ಟ್‌ ನಿರ್ಮಾಣ

* 100 ಎಕರೆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ
* ವನ್ಯಜೀವಿಧಾಮಕ್ಕೆ  ಆತಂಕದ ಸೃಷ್ಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.