ADVERTISEMENT

ಸಿಎನ್‌ಆರ್‌ ರಾವ್‌ ಕೆಳಸೇತುವೆ: ಕಳಪೆ ಕಾಮಗಾರಿ?

​ಪ್ರಜಾವಾಣಿ ವಾರ್ತೆ
Published 21 ಜುಲೈ 2014, 19:24 IST
Last Updated 21 ಜುಲೈ 2014, 19:24 IST

ಬೆಂಗಳೂರು: ಸಿ.ಎನ್‌.ಆರ್‌.ರಾವ್‌ ಕೆಳಸೇತುವೆಯು ಉದ್ಘಾಟ­ನೆಗೊಂಡು  ಕೇವಲ 50 ದಿನವಾಗಿದೆ. ಆಗಲೇ  ಒಂದು ಭಾಗದ ಸರ್ವೀಸ್‌ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ರಸ್ತೆಯಲ್ಲಿ ಅಲ್ಲಲ್ಲಿ  ತಗ್ಗು ಬಿದ್ದಿದೆ.

₨ 30 ಕೋಟಿ ವೆಚ್ಚದಲ್ಲಿ ಮಲ್ಲೇಶ್ವರ, ಯಶವಂತಪುರ ಹಾಗೂ ಮೇಖ್ರಿ ವೃತ್ತ ನಡುವೆ ಸಂಪರ್ಕ ಕಲ್ಪಿಸಲು ಐಐಎಸ್‌ಸಿ ಜಂಕ್ಷನ್‌ ಬಳಿ ‘ಸಿಎನ್‌ಆರ್‌ ರಾವ್‌ ಕೆಳಸೇತುವೆ’ ನಿರ್ಮಿಸಲಾಗಿದೆ.2010 ರ ಜನವರಿಯಲ್ಲಿ ಆರಂಭವಾದ ಕಾಮಗಾರಿ 18 ತಿಂಗಳ ಅವಧಿಗೆ ಮುಗಿಯಬೇಕಿತ್ತು. ಆದರೆ, ಬಿ.ಎಸ್‌. ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ಶೆಟ್ಟರ್‌, ಸಿದ್ದರಾಮಯ್ಯ ಸೇರಿದಂತೆ ಒಟ್ಟು ನಾಲ್ಕು ಮುಖ್ಯಮಂತ್ರಿಗಳು ಕಾಮಗಾರಿ ಪರಿಶೀಲನೆ ನಡೆಸಿದರೂ ಆರು ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿತು. ಕಳೆದ ಆರು ತಿಂಗಳಲ್ಲಿ ತರಾ­ತುರಿಯಲ್ಲಿ ರಸ್ತೆ ಕಾಮಗಾರಿ­ಯನ್ನು ಪೂರ್ಣಗೊಳಿಸಲಾ­ಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2014 ರ ಮೇ 26ರಂದು ಕೆಳಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು.

ಅಧಿಕಾರಿಗಳ ಲೋಪ: ಬಿಬಿಎಂಪಿಯ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ್‌ ಈ ಕುರಿತು ಪ್ರತಿಕ್ರಿಯಿಸಿ, ‘ಕೆಳಸೇತುವೆಯ ರಸ್ತೆಯನ್ನು ತರಾತುರಿಯಿಂದ ನಿರ್ಮಾಣ ಮಾಡ­ಲಾಗಿದೆ. ಇದರಿಂದ, ಕಾಮಗಾರಿಯು ಕಳಪೆಯಾಗಿ­ರುವ ಸಾಧ್ಯತೆಯಿದೆ. ರಸ್ತೆಯನ್ನು ಇನ್ನೂ ಗುಣಮಟ್ಟದಿಂದ ಮಾಡಬಹುದಿತ್ತು. ಆದರೆ, ರಸ್ತೆ ನಿರ್ಮಾಣ ಕಾಮಗಾರಿ­ಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿಲ್ಲ’ ಎಂದರು.
‘ಗೇಲ್‌ ಕಂಪೆನಿಯು ಪೈಪ್‌ಲೈನ್‌ ಹಾಕಿರುವುದರಿಂದ ರಸ್ತೆಯು ಕುಸಿದಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇವರು ಮಾಡಿರುವ ತಪ್ಪುಗಳನ್ನು ಬೇರೆಯವರ ಮೇಲೆ ಹೊರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಗುತ್ತಿಗೆದಾರರು ತಪ್ಪಿತಸ್ಥರು ಎಂದು ಕಂಡುಬಂದರೆ, ಅವ­ರನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಅವರಿಗೆ ಮುಂದೆ ಯಾವುದೇ ಗುತ್ತಿಗೆ ದೊರೆಯದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ದುರಸ್ತಿ ಕಾರ್ಯ: ಗುತ್ತಿಗೆದಾರರು ಸಿಎನ್‌ಆರ್‌ ರಾವ್‌ ಕೆಳ­ಸೇತುವೆಯಲ್ಲಿ ಬಿದ್ದಿರುವ ತಗ್ಗುಗಳನ್ನು ಸರಿಪಡಿಸಲು ರಸ್ತೆ­ಬಂದ್‌ ಮಾಡಿ ರಸ್ತೆ ಅಗೆದು ದುರಸ್ತಿ ಕಾರ್ಯ­ ಕೈಗೊಂ­ಡಿದ್ದಾರೆ. ಆದರೆ, ರಸ್ತೆಯ ದುರಸ್ತಿ ಕಾರ್ಯ ಬಿಬಿಎಂಪಿ ಆಯುಕ್ತರ ಗಮನಕ್ಕೆ ಬಂದಿಲ್ಲ. ಈ ಕುರಿತು ಆಯುಕ್ತ ಎಂ. ಲಕ್ಷ್ಮಿನಾರಾಯಣ ಅವರನ್ನು ಪ್ರಶ್ನಿಸಿದಾಗ ಪರಿಶೀಲಿಸಿ, ರಸ್ತೆಯನ್ನು ಸರಿಪಡಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಕಳಪೆ ಕಾಮಗಾರಿ?:  ಮಾಧವ ಹೈಟೆಕ್‌ ಹಾಗೂ ಈಸ್ಟ್‌ ಕೋಸ್ಟ್‌ ಕನ್‌ಸ್ಟ್ರಕ್ಷನ್ಸ್‌ ಅಂಡ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಇಸಿಸಿಐ) ಎಂಬ ಎರಡು ಗುತ್ತಿಗೆ ಕಂಪೆನಿಗಳ ಜಂಟಿ ಸಹಭಾಗಿತ್ವದಲ್ಲಿ ಕೆಳಸೇತುವೆ ನಿರ್ಮಾಣವಾಗಿದೆ. ತರಾತುರಿಯಲ್ಲಿ ರಸ್ತೆ ನಿರ್ಮಾಣದ ವೇಳೆ ಮಣ್ಣು ಸಮತಟ್ಟು ಮಾಡಿ ಹದಕ್ಕೆ ತಾರದೇ ಇರುವುದರಿಂದ ರಸ್ತೆ ಕುಸಿದು ಗುಂಡಿಗಳು ಬಿದ್ದಿವೆ ಎಂದು ಹೇಳಲಾಗುತ್ತಿದೆ.

ಗುತ್ತಿಗೆದಾರರು ತಪ್ಪಿತಸ್ಥರಾದರೆ ಕ್ರಮ
ರಸ್ತೆ ನಿರ್ಮಾಣ ಮಾಡುವಾಗ ಆದ ತರಾತುರಿ ­ಯಿಂದ ಎಲ್ಲೋ ಒಂದು ಕಡೆಯಲ್ಲಿ ಕಳಪೆ ಕಾಮಗಾರಿ ನಡೆದಿ­ರುವ ಸಾಧ್ಯತೆಯಿದೆ. ಗುತ್ತಿಗೆದಾರರರು ತಪ್ಪಿತಸ್ಥರು ಎಂದು ತಿಳಿದು ಬಂದರೆ ಕ್ರಮ ಕೈಗೊಳ್ಳಲಾಗುವುದು.
– ಬಿ.ಸೋಮಶೇಖರ್‌,  ಅಧ್ಯಕ್ಷರು,
ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ

‘ಪರಿಶೀಲಿಸಿ ಸರಿಪಡಿಸೋಣ’
ಯಾವುದೇ ಪ್ರದೇಶದಲ್ಲಿ ಹೊಸ ರಸ್ತೆಯ ಕಾಮಗಾರಿ ನಡೆಸಿದಾಗ ರಸ್ತೆ ಕುಸಿಯು­ತ್ತದೆ. ಇಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮಾಡ­ಲಾಗಿದೆ ಅದಕ್ಕೆ ಹೀಗಾಗಿದೆ. ಎಲ್ಲವೂ ಸರಿಯಾ­ಗಿರುವುದಿಲ್ಲ. ಎಲ್ಲೋ ಒಂದೊಂದು ಕಡೆ ತಪ್ಪುಗಳು ನಡೆಯುತ್ತವೆ. ಪರಿಶೀಲಿಸಿ  ಸರಿ ಮಾಡಲಾಗುವುದು.
– ಎಂ.ಲಕ್ಷ್ಮೀನಾರಾಯಣ, ಆಯುಕ್ತರು, ಬಿಬಿಎಂಪಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.