ADVERTISEMENT

ಸಿಐಡಿ ತನಿಖೆ ನಡೆಸಲು ಅಗ್ನಿ ಶ್ರೀಧರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:12 IST
Last Updated 27 ಮಾರ್ಚ್ 2017, 20:12 IST
ಸಿಐಡಿ ತನಿಖೆ ನಡೆಸಲು ಅಗ್ನಿ ಶ್ರೀಧರ್‌ ಒತ್ತಾಯ
ಸಿಐಡಿ ತನಿಖೆ ನಡೆಸಲು ಅಗ್ನಿ ಶ್ರೀಧರ್‌ ಒತ್ತಾಯ   

ಬೆಂಗಳೂರು: ‘ಫೆಬ್ರುವರಿ 7ರಂದು ಮನೆಯ ಮೇಲೆ ಪೊಲೀಸರು ದಾಳಿ ಮಾಡಿದ್ದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು’ ಎಂದು ಪತ್ರಕರ್ತ ಅಗ್ನಿ ಶ್ರೀಧರ್‌ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಮನೆಯಲ್ಲಿದ್ದ ಎಲ್ಲ ಶಸ್ತ್ರಾಸ್ತ್ರಗಳಿಗೆ ಪರವಾನಗಿ ಇದೆ. ಅಷ್ಟಾದರೂ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವುದಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಡಿಜಿಪಿಗೆ ಮನವಿ ಸಲ್ಲಿಸಿದ್ದು, ಅದರೊಂದಿಗೆ ಪರವಾನಗಿ ಪ್ರತಿಗಳನ್ನು ಲಗತ್ತಿಸಿದ್ದೇವೆ’ ಎಂದು ಹೇಳಿದರು.

‘ದಾಳಿ ವೇಳೆ ದೊರೆತ ಕತ್ತಿಗಳು ‘ತಮಸ್ಸು’ ಚಿತ್ರ ನಿರ್ಮಿಸುವಾಗ ತಂದವು. ಚಲನಚಿತ್ರದ ನೆನಪಿಗಾಗಿ ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದೆ’.

ADVERTISEMENT

‘ರೌಡಿಶೀಟರ್‌ಗಳು ಎರಡು ವರ್ಷಗಳವರೆಗೆ  ಅಪರಾಧ ಚಟುವಟಿಕೆಯಲ್ಲಿ ತೊಡಗದಿದ್ದರೆ   ರೌಡಿಶೀಟರ್‌ ಪಟ್ಟಿಯಿಂದ ಅವರ ಹೆಸರು ತೆಗೆಯಬೇಕೆಂಬ ನಿಯಮವಿದೆ. ನಾನು 19 ವರ್ಷಗಳಿಂದ ಯಾವುದೇ ಅಪರಾಧವೆಸಗಿಲ್ಲ. ಆದರೂ ನನ್ನ ಹೆಸರು ಪಟ್ಟಿಯಲ್ಲಿದೆ’ ಎಂದು ದೂರಿದರು.

‘ಮಗನಂತಿರುವ ಸುನೀಲ್‌, ಟಾಟಾ ರಮೇಶ್‌ ಎಂಬುವರಿಗೆ ಬೆದರಿಕೆ ಹಾಕಿದ್ದಾನೆ ಎಂದು ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ದೂರು ದಾಖಲಿಸಿಕೊಂಡಿದ್ದಾರೆ. ಸುನೀಲ್‌ ಬೆದರಿಕೆ ಹಾಕಿದ್ದನ್ನು ಪೊಲೀಸರು ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ಮುಖ ತೋರಿಸಲಾರೆ’ ಎಂದು ಸವಾಲು ಹಾಕಿದರು.

‘ಸ್ವ–ರಕ್ಷಣೆಗಾಗಿ ಪಡೆದಿರುವ ಗನ್‌ಗಳ ಪರವಾನಗಿಯ ಪ್ರತಿಗಳನ್ನು ಮುಖ್ಯಮಂತ್ರಿ ಅವರಿಗೂ ಸಲ್ಲಿಸುತ್ತೇನೆ. ದೂರುಗಳ ಕುರಿತು ಸಿಐಡಿ ತನಿಖೆ ನಡೆಸದಿದ್ದರೆ ದಲಿತ, ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡುತ್ತೇನೆ’ ಎಂದು ಹೇಳಿದರು.

‘ಕಡಬಗೆರೆ ಶ್ರೀನಿವಾಸ್‌ ಹತ್ಯೆಯ ಯತ್ನ ಪ್ರಕರಣದಲ್ಲಿ ನನ್ನ ಹೆಸರನ್ನು ತಳಕು ಹಾಕಲಾಗಿದೆ. ಅಲ್ಲದೇ ನಾನಿರುವ ಕರುನಾಡು ಸೇನೆ ಸಂಘಟನೆಯನ್ನು ಬೆಳೆಯಲು ಕೆಲವರು ಬಿಡುತ್ತಿಲ್ಲ’ ಎಂದು ಆರೋಪಿಸಿದರು.

**

ಇಂದಿನ ಭೂಗತ ಜಗತ್ತು ಪೊಲೀಸರು, ರಾಜಕಾರಣಿಗಳು ಮತ್ತು ಮಾಧ್ಯಮದಲ್ಲಿ ಇರುವವರಿಂದ ಕೂಡಿದೆ.
-ಅಗ್ನಿ ಶ್ರೀಧರ್‌, ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.