ADVERTISEMENT

ಸಿಡಿಆರ್ ಪರಿಶೀಲನೆ ‘ಕಾರಣ’ ಕಡ್ಡಾಯ: ಡಿಜಿಪಿ ಆದೇಶ

ಕರೆಗಳ ವಿವರ ಕಲೆಹಾಕುವಲ್ಲಿ ಅಧಿಕಾರ ದುರ್ಬಳಕೆ ಆರೋಪ

ಎಂ.ಸಿ.ಮಂಜುನಾಥ
Published 6 ಮೇ 2015, 20:10 IST
Last Updated 6 ಮೇ 2015, 20:10 IST

ಬೆಂಗಳೂರು: ಮೊಬೈಲ್‌ ಕರೆಗಳ ಮಾಹಿತಿ ದುರುಪಯೋಗ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮೊಬೈಲ್ ಕರೆಗಳ ವಿವರಗಳನ್ನು (ಸಿಡಿಆರ್‌) ಪಡೆಯುವುದಕ್ಕೂ ಮೊದಲು ತನಿಖಾಧಿಕಾರಿಗಳು ‘ನಿರ್ದಿಷ್ಟ ಕಾರಣ’ ತಿಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಅಲ್ಲದೆ, ಕರೆಗಳ ಪರಿಶೀಲನೆಗಾಗಿಯೇ ಪ್ರತಿ ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ತಾಂತ್ರಿಕ ವಿಭಾಗವನ್ನು ಆರಂಭಿಸಲಾಗಿದ್ದು, ಹಿರಿಯ ಅಧಿಕಾರಿಯೊಬ್ಬರಿಗೆ ವಿಭಾಗದ ನಿರ್ವಹಣಾ ಜವಾಬ್ದಾರಿ ನೀಡಲಾಗಿದೆ.
ಕೊಲೆ, ದರೋಡೆ, ಅಪಹರಣ, ಅತ್ಯಾಚಾರ ಸೇರಿದಂತೆ ಅಪರಾಧ ಪ್ರಕರಣಗಳ ಆರೋಪಿಗಳ ಪತ್ತೆಯಲ್ಲಿ ಸಿಡಿಆರ್‌ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಅಲ್ಲದೆ, ಪ್ರಕರಣಕ್ಕೆ ಬಹುಮುಖ್ಯ ಸಾಕ್ಷ್ಯವಾಗಿಯೂ ಇದನ್ನು ಪರಿಗಣಿಸಲಾಗುತ್ತದೆ. ಆದರೆ, ಕೆಲವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಖಾಸಗಿ ಸಂಗತಿಗಳಿಗಾಗಿ ಕರೆಗಳ ಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಹೀಗಾಗಿ ಬೇಕಾಬಿಟ್ಟಿಯಾಗಿ  ಸಿಡಿಆರ್‌ ಪರಿಶೀಲಿಸುವ ಕ್ರಮಕ್ಕೆ ಲಗಾಮು ಹಾಕಲು ನಿರ್ಧರಿಸಿದ್ದ ಹಿಂದಿನ ಡಿಜಿಪಿ ಲಾಲ್‌ ರೋಕುಮ ಪಚಾವೊ, ಫೆಬ್ರುವರಿ ಕೊನೆಯ ವಾರದಲ್ಲಿ ಕರೆ ವಿವರಗಳ ಪರಿಶೀಲನಾ ಕ್ರಮವನ್ನು ಬಿಗಿಗೊಳಿಸಿದ್ದರು. ಇದೀಗ ಆ ಕ್ರಮಗಳು ಚಾಲ್ತಿಗೆ ಬಂದಿವೆ.

ಹೊಸ ಕ್ರಮವೇನು:  ಮೊದಲಿನಂತೆ ಮೊಬೈಲ್ ಸಂಖ್ಯೆ ಕೊಟ್ಟು ತಾಂತ್ರಿಕ ವಿಭಾಗದಿಂದ ಕರೆಗಳ ವಿವರಗಳನ್ನು ಪಡೆಯುವಂತಿಲ್ಲ. ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆಗಳ ಮಾಹಿತಿ ಕೋರಲಾಗಿದೆ ಎಂದು ಠಾಣಾಧಿಕಾರಿ ಅಥವಾ ತನಿಖಾಧಿಕಾರಿ ಪತ್ರದ ಮುಖೇನ ಸ್ಪಷ್ಟಪಡಿಸಬೇಕು.

ನಂತರ ಆ ಪತ್ರವು ಹಿರಿಯ ಅಧಿಕಾರಿಗಳಿಂದ ದೃಢೀಕೃತಗೊಂಡು ತಾಂತ್ರಿಕ ವಿಭಾಗಕ್ಕೆ ರವಾನೆಯಾಗಬೇಕು. ಬಳಿಕ ಆ ಪತ್ರದ ಜೆರಾಕ್ಸ್‌ ಪ್ರತಿ ಪಡೆದು ವಿಭಾಗದ ಸಿಬ್ಬಂದಿ, ಸಂಬಂಧಪಟ್ಟ ಸಂಖ್ಯೆಯ ಕರೆ ವಿವರಗಳ ಮಾಹಿತಿ ಕೊಡಬೇಕಿದೆ. ಸಾಮಾನ್ಯವಾಗಿ ಠಾಣೆಯ ಎಸ್‌ಐ ಕರೆಗಳ ವಿವರ ಪರಿಶೀಲಿಸುತ್ತಾರೆ. ಹೊಸ ಕ್ರಮದ ಪ್ರಕಾರ ಎಸ್‌ಐ ಸಿಡಿಆರ್‌ ಪರಿಶೀಲಿಸಲು ಮೊದಲು ಪ್ರಸ್ತಾವ ಸಿದ್ಧಪಡಿಸಬೇಕು.

ಆ ಪ್ರಸ್ತಾವವು ಇನ್‌ಸ್ಪೆಕ್ಟರ್, ಎಸಿಪಿ/ಡಿವೈಎಸ್‌ಪಿ ಹಾಗೂ ಎಸ್ಪಿ/ಡಿಸಿಪಿ ಅವರಿಂದ ದೃಢಿಕೃತಗೊಂಡು ತಾಂತ್ರಿಕ ವಿಭಾಗವನ್ನು ತಲುಪಬೇಕು. ಅಲ್ಲದೆ, ಪ್ರತಿ ಅಧಿಕಾರಿ ತಾವು ಶಿಫಾರಸು ಮಾಡಿದ ಮೊಬೈಲ್‌ ಸಂಖ್ಯೆಗಳ ಬಗ್ಗೆ ದಾಖಲೆ ನಿರ್ವಹಣೆ ಮಾಡಬೇಕು. ಈ ಬಗ್ಗೆ ಪ್ರತಿಯೊಬ್ಬರು ತಿಂಗಳಿಗೊಮ್ಮೆ ಡಿಜಿಪಿ ಕಚೇರಿಗೆ ವರದಿ ಸಲ್ಲಿಸಬೇಕು.

ಪೊಲೀಸ್ ಆಕ್ಷೇಪ: ‘ಹೊಸ ಕ್ರಮದಿಂದ ರೌಡಿಗಳು ಸೇರಿದಂತೆ ಅಪರಾಧ ಹಿನ್ನೆಲೆವುಳ್ಳ ವ್ಯಕ್ತಿಗಳ ಮೇಲೆ ನಿಗಾ ಇಡುವುದು ಕಷ್ಟವಾಗುತ್ತದೆ. ಕೃತ್ಯ ನಡೆದ ಕೂಡಲೇ ಆರೋಪಿಯ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದರೆ ಆತ ಸಿಕ್ಕಿ ಬೀಳುತ್ತಾನೆ. ಆದರೆ, ಪರಿಶೀಲನೆ ಪ್ರಕ್ರಿಯೆ ಇಷ್ಟೊಂದು ನಿಧಾನವಾದರೆ  ಪತ್ತೆ ಕಾರ್ಯ ತಡವಾಗುವ ಸಾಧ್ಯತೆ ಇರುತ್ತದೆ’ ಎಂದು ಕೆಲ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಗತ್ಯವಿದ್ದಾಗ ಮಾತ್ರ ಕರೆಗಳ ಮಾಹಿತಿ ಸಂಗ್ರಹಿಸಬೇಕು. ನಿಯಮ ಪಾಲಿಸದ ಸಿಬ್ಬಂದಿ ಮೇಲೆ ಕಾನೂನು–ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗದ ಎಡಿಜಿಪಿಗಳು ನಿಗಾ ಇಡಲಿದ್ದಾರೆ.    – ಓಂಪ್ರಕಾಶ್, ಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.