ADVERTISEMENT

ಸಿಲಿಂಡರ್ ಸ್ಫೋಟ: ಆರು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 20:01 IST
Last Updated 19 ಸೆಪ್ಟೆಂಬರ್ 2014, 20:01 IST

ಬೆಂಗಳೂರು: ವರ್ತೂರು ಮುಖ್ಯ-ರಸ್ತೆಯ ಪ್ರಕಾಶ್‌ಲೇಔಟ್‌ನಲ್ಲಿ ಶುಕ್ರ-ವಾರ ಬೆಳಿಗ್ಗೆ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಗಾಯಗೊಂಡಿದ್ದಾರೆ.

ಮಹಮದ್ (50), ಅವರ ಮಗ ಸಮೀರ್ (28), ಸೊಸೆ ಉಸ್ಮಾನ್ ಕಾಶ್ಮಿಲ್ (27), ಪಕ್ಕದ ಮನೆಯ ಅಂಬರೀಷ್ (42), ಅವರ ಮಗಳು ಕೃತಿ (17) ಹಾಗೂ ಅತ್ತೆ ಗೌರಮ್ಮ (60) ಗಾಯಗೊಂಡವರು.ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಮದ್ ಅವರ ದೇಹ ಶೇ 60ರಷ್ಟು ಸುಟ್ಟು ಹೋಗಿದ್ದು, ಸ್ಥಿತಿ ಗಂಭೀರ-ವಾಗಿದೆ. ಸದ್ಯ ತುರ್ತು ನಿಗಾ ಘಟಕ-ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕಾಶ್‌ಲೇಔಟ್‌ನ ರಾಜಬಾವಿ ರಸ್ತೆಯಲ್ಲಿ ವಿಜಯ್‌ಕುಮಾರ್‌ ಎಂಬು-ವರಿಗೆ ಸೇರಿದ ಮೂರು ಅಂತಸ್ತಿನ ಮನೆ ಇದೆ. ಆ ಕಟ್ಟಡದ ನೆಲಮಹಡಿಯ ಮನೆಗೆ ಬೆಳಗಾವಿಯ ಮಹಮದ್‌ ಕುಟುಂಬ 15 ದಿನಗಳ ಹಿಂದೆಯಷ್ಟೇ ಬಾಡಿಗೆಗೆ ಬಂದಿದೆ. ಗುರುವಾರ ರಾತ್ರಿ  ಉಸ್ಮಾನ್‌ ಅವರು ಸಿಲಿಂಡರ್‌ ಬಂದ್‌ ಮಾಡದೆ ಮಲಗಿದ್ದಾರೆ. ಇದರಿಂದ ಅನಿಲ ಸೋರಿಕೆಯಾಗಿದೆ. ಬೆಳಿಗ್ಗೆ  ಎಂಟು ಗಂಟೆಗೆ ಎಚ್ಚರಗೊಂಡ ಮಹಮದ್, ಅಡುಗೆ ಕೋಣೆಗೆ ತೆರಳಿ ವಿದ್ಯುತ್‌ ಸ್ವಿಚ್‌ ಒತ್ತುತ್ತಿದ್ದಂತೆಯೇ ಸ್ಫೋಟಗೊಂಡಿದೆ.

ಸ್ಫೋಟದ ತೀವ್ರತೆಗೆ ಮಹಮದ್‌ ಮತ್ತು ಅಂಬರೀಷ್‌ ಅವರ ಮನೆಯ ಗೋಡೆಗಳು ನೆಲಕ್ಕುರುಳಿವೆ. ಟಿ.ವಿ, ಪೀಠೋಪಕರಣಗಳು ಛಿದ್ರವಾಗಿವೆ. ಮನೆ ಎದುರು ನಿಂತಿದ್ದ ಎರಡು ಬೈಕ್‌ಗಳು ಹಾಗೂ ಒಂದು ಸರಕು ಸಾಗಣೆ ವಾಹನ ಜಖಂಗೊಂಡಿದೆ. ಮುಂದಿನ ಗೇಟ್‌ ಸುಮಾರು 20 ಮೀಟರ್‌ನಷ್ಟು ದೂರು ಹಾರಿ ಬಿದ್ದಿದೆ.   ಅಕ್ಕಪಕ್ಕದ ನಾಲ್ಕೈದು ಮನೆಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಗೋಡೆಗಳು ಸಹ ಬಿರುಕು ಬಿಟ್ಟಿವೆ.

ಸ್ಫೋಟದ ಸದ್ದು ಕೇಳುತ್ತಿದ್ದಂತೆ ಗಾಬರಿಯಿಂದ ಮನೆಯಿಂದ ಹೊರ ಬಂದ ಸ್ಥಳೀಯರು, ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ಹೊರ-ತೆಗೆದಿದ್ದಾರೆ. ನಂತರ ವರ್ತೂರು ಠಾಣೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ವಿಷ-ಯ ತಿಳಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.