ADVERTISEMENT

ಸೂಟ್‌ಕೇಸ್ ಪತ್ತೆ; ಹಣ–ಸ್ಕ್ರಿಪ್ಟ್ ನಾಪತ್ತೆ

ಎಸ್‌.ನಾರಾಯಣ್ ಅವರ ಕಾರಿನಿಂದ ಕಳವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಬೆಂಗಳೂರು: ವಿಜಯನಗರದ ಮಾರುತಿ ಮಂದಿರ ಸಮೀಪ ನಿರ್ದೇಶಕ ಎಸ್‌.ನಾರಾಯಣ್ ಅವರ ಕಾರಿನಿಂದ  ಬುಧವಾರ ಸೂಟ್‌ಕೇಸ್ ಕಳವು ಮಾಡಿದ್ದ ದುಷ್ಕರ್ಮಿಗಳು, ಅದರಲ್ಲಿದ್ದ ₨ 3.80 ಲಕ್ಷ ಹಾಗೂ ಚಿತ್ರಕತೆಗಳನ್ನು ದೋಚಿ ಬ್ಯಾಟರಾಯನಪುರ ಪೊಲೀಸ್ ಠಾಣೆ ಹಿಂಭಾಗ ಸೂಟ್‌ಕೇಸ್ ಇಟ್ಟು ಪರಾರಿಯಾಗಿದ್ದಾರೆ.

ಗುರುವಾರ ಬೆಳಿಗ್ಗೆ 6.30ರ ಸುಮಾರಿಗೆ ಅನಾಥವಾಗಿ ಬಿದ್ದಿದ್ದ ಆ ಸೂಟ್‌ಕೇಸ್ ಕಂಡ ಪಾದಚಾರಿಗಳು, ಕೂಡಲೇ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಶ್ವಾನದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಸೂಟ್‌ಕೇಸ್ ಒಡೆದು ನೋಡಿದಾಗ ಎಸ್‌.ನಾರಾಯಣ್ ಅವರ ಗುರುತಿನ ಚೀಟಿ, ಚೆಕ್‌ಬುಕ್‌ ಹಾಗೂ ಎರಡು ಖಾಲಿ ಹಾಳೆಗಳು ಪತ್ತೆಯಾಗಿವೆ.

ಬುಧವಾರ ಬೆಳಿಗ್ಗೆ 11.30ಕ್ಕೆ ಎಸ್‌.ನಾರಾಯಣ್ ಅವರು ಮಾರುತಿ ಮಂದಿರದ ಫೆಡರಲ್ ಬ್ಯಾಂಕ್‌ಗೆ ಹೋಗಿದ್ದರು. ಅವರು ಒಳಗೆ ಹೋದಾಗ ದುಷ್ಕರ್ಮಿಗಳು ಕಾರು ಚಾಲಕನ ನಾಗೇಶ್‌ ಅವರ ಗಮನ ಬೇರೆಡೆ ಸೆಳೆದು ಸೂಟ್‌ಕೇಸ್ ಎಗರಿಸಿದ್ದರು. ಅದರಲ್ಲಿ 3.80 ಲಕ್ಷ ನಗದು ಹಾಗೂ 12 ಚಿತ್ರಕತೆಗಳು (ಸ್ಕ್ರಿಪ್ಟ್‌) ಇದ್ದ ಬಗ್ಗೆ ನಾರಾಯಣ್ ವಿಜಯನಗರ ಠಾಣೆಗೆ ದೂರು ಕೊಟ್ಟಿದ್ದರು.

ಲಾಕ್ ಆಗಿತ್ತು:  ‘ರಹಸ್ಯ ಸಂಖ್ಯೆ ಕೊಟ್ಟು ಸೂಟ್‌ಕೇಸ್‌ ಲಾಕ್ ಮಾಡಿದ್ದೆ’ ಎಂದು ನಾರಾಯಣ್ ದೂರಿನಲ್ಲಿ ಹೇಳಿದ್ದಾರೆ. ಆದರೆ, ಸೂಟ್‌ಕೇಸ್‌ ಒಡೆಯದೆ ಹಣ ಹಾಗೂ ಸ್ಕ್ರಿಪ್ಟ್‌ ಕಳವಾಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ನಾರಾಯಣ್ ಅವರನ್ನು ಕೇಳಿದರೆ, ‘ಬಹುಶಃ ಲಾಕ್‌ ಮಾಡುವುದನ್ನು ಮರೆತಿದ್ದೆ ಎನಿಸುತ್ತದೆ. ಇದರಿಂದ ಕಳ್ಳರಿಗೆ ಹಣ–ಸ್ಕ್ರಿಪ್ಟ್ ಕದಿಯಲು ಸಾಧ್ಯವಾಗಿದೆ. ಒಮ್ಮೆ ಸೂಟ್‌ಕೇಸ್ ತೆಗೆದ ಬಳಿಕ, ಯಾವುದೇ ಸಂಖ್ಯೆ ಒತ್ತಿದರೂ ಅದು ಲಾಕ್‌ ಆಗುತ್ತದೆ’ ಎಂದು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.