ADVERTISEMENT

ಸೆಪ್ಟೆಂಬರ್‌ 26ರಂದು ಕರ್ನಾಟಕ ಬಂದ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:54 IST
Last Updated 4 ಸೆಪ್ಟೆಂಬರ್ 2015, 19:54 IST

ಬೆಂಗಳೂರು: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ, ಮಹಾದಾಯಿ ವಿವಾದ ಇತ್ಯರ್ಥ ಮತ್ತು  ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಇದೇ 26ರಂದು ಕರ್ನಾಟಕ ಬಂದ್‌ ಆಚರಿಸಲಾಗುವುದು ಎಂದು ಕನ್ನಡ ಒಕ್ಕೂಟ ತಿಳಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ‘ಮಹಾದಾಯಿ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ, ಆ ಪ್ರದೇಶದ ಜನ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕಾರಣಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು, ಪರಸ್ಪರ ದೋಷಾರೋಪಣೆ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಹಾದಾಯಿ ಯೋಜನೆ ಜಾರಿಗೆ ರಾಜ್ಯದ ಸಂಸದರು ಪಕ್ಷ ಭೇದ ಮರೆತು ಕೇಂದ್ರದ ಮೇಲೆ ಒತ್ತಡ ಹೇರಬೇಕು.  ಕರ್ನಾಟಕ– ಗೋವಾ ಹಾಗೂ ಮಹಾರಾಷ್ಟ್ರಗಳಿಗೆ ಸಂಬಂಧಿಸಿದ ಈ ಜಲ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪದಿದ್ದರೆ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

ಲಾರಿ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ‘ಗೋವಾಕ್ಕೆ ರಾಜ್ಯದಿಂದ ನಿತ್ಯ 150 ಲೋಡ್‌ ಅಕ್ಕಿ, 160 ಲೋಡ್‌ ದಿನಸಿ, 70 ಲೋಡ್‌ ಹಾಲು ಪೂರೈಕೆ ಆಗುತ್ತಿದೆ. ಒಂದು ದಿನ ಸರಕು ಸಾಗಣೆ ಸ್ಥಗಿತಗೊಳಿಸಿದರೆ ಗೋವಾದ ಜನ ಉಪವಾಸ ಬೀಳಬೇಕಾಗುತ್ತದೆ.  ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೆ. 25ರ ಮಧ್ಯರಾತ್ರಿಯಿಂದಲೇ ಸರಕು ಪೂರೈಕೆ ಸ್ಥಗಿತಗೊಳಿಸಬೇಕಾಗುವುದು’ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡಿ, ‘ಸಂಸ್ಥೆಯ 1.25 ಲಕ್ಷ ಕಾರ್ಮಿಕರು  ಬಂದ್‌ನಲ್ಲಿ ಭಾಗವಹಿಸಲಿದ್ದಾರೆ. ಅಂದು 22 ಸಾವಿರ ಬಸ್‌ಗಳು ಸಂಚಾರ ಸ್ಥಗಿತಗೊಳಿಸಲಿವೆ’ ಎಂದರು.

ಚಿತ್ರರಂಗ ಬೆಂಬಲ: ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ‘ಬಂದ್‌ಗೆ ಚಲನಚಿತ್ರರಂಗವೂ ಬೆಂಬಲ ನೀಡಲಿದೆ. ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಕೆಲವು ನಟರು ಈಗಾಗಲೇ ಕೈಜೋಡಿಸಿದ್ದಾರೆ’ ಎಂದರು.

ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಶ್‌ ಮಾತನಾಡಿ, ‘ಬಂದ್‌ಗೆ ಸಾಹಿತಿಗಳೂ ಬೆಂಬಲ ನೀಡಬೇಕು’ ಎಂದು ಕೋರಿದರು.
*
ಇಂದು ಬಂದ್‌ ಇಲ್ಲ
ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ರೈತರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸೆ.5ರಂದು ಕರ್ನಾಟಕ ಬಂದ್‌ ನಡೆಸಲು ರೈತ ಸಂಘಟನೆಗಳು ಮುಂದಾಗಿದ್ದವು.  ಈ ಬಂದ್‌ಗೆ ಪೂರ್ವ ಸಿದ್ಧತೆ ನಡೆದಿಲ್ಲ.  ಹಾಗಾಗಿ ಈ ಬಂದ್‌ ಕೈಬಿಟ್ಟು ಸೆ. 26ರಂದು ರಾಜ್ಯದಾದ್ಯಂತ ಬಂದ್‌ ನಡೆಸೋಣ ಎಂದರು.
*
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಕನ್ನಡ ಪರ ಸಂಘಟನೆಗಳು ಸ್ಪಂದಿಸುವುದಿಲ್ಲ ಎಂಬ ಭಾವನೆ ಸಲ್ಲದು. ರಾಜ್ಯ ಎಲ್ಲಾ ಭಾಗದ ಜನರ ಸಮಸ್ಯೆಗಳಿಗೂ ನಾವು ಸ್ಪಂದಿಸುತ್ತೇವೆ.
– ವಾಟಾಳ್‌ ನಾಗರಾಜ್‌,
ಕನ್ನಡ ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.