ADVERTISEMENT

ಸೆರೆ ಸಿಕ್ಕ ಕಳ್ಳರು; ₹ 22 ಲಕ್ಷದ ಚಿನ್ನ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:58 IST
Last Updated 24 ಜೂನ್ 2017, 19:58 IST
ಸೆರೆ ಸಿಕ್ಕ ಕಳ್ಳರು;  ₹ 22 ಲಕ್ಷದ ಚಿನ್ನ ಜಪ್ತಿ
ಸೆರೆ ಸಿಕ್ಕ ಕಳ್ಳರು; ₹ 22 ಲಕ್ಷದ ಚಿನ್ನ ಜಪ್ತಿ   

ಬೆಂಗಳೂರು: ಮೂವರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು, ₹ 22 ಲಕ್ಷ ಮೌಲ್ಯದ 730 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ರಾಜಗೋಪಾಲನಗರದ ಶಿವಕುಮಾರ್ ಅಲಿಯಾಸ್ ಕಾಗೆ ಶಿವ (29), ನಂದಿನಿಲೇಔಟ್‌ನ ಎ.ಎಂ.ಅರುಣ್ (29) ಹಾಗೂ ಪೀಣ್ಯದ ಅರುಣ್ ಅಲಿಯಾಸ್ ಆರ್‌ಎಂಸಿ (24) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಚಂದ್ರಾಲೇಔಟ್, ರಾಜರಾಜೇಶ್ವರಿನಗರ ಹಾಗೂ ಅನ್ನಪೂರ್ಣೇಶ್ವರಿನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 17 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಾಹ್ನದ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡುತ್ತಿದ್ದ ಇವರು, ಬೀಗ ಮುರಿದು ಮನೆಗಳಿಗೆ ನುಗ್ಗಿ ಒಡವೆಗಳೊಂದಿಗೆ ಪರಾರಿಯಾಗುತ್ತಿದ್ದರು.

ADVERTISEMENT

2016ರ ನ.28ರಂದು ಸುಂಕದಕಟ್ಟೆಯ ಶಿವಣ್ಣ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು, ಕೆಲ ದಿನಗಳ ನಂತರ ಅದೇ ರಸ್ತೆಯ ತಿಮ್ಮಯ್ಯ ಎಂಬುವರ ಮನೆಯಲ್ಲಿ ₹ 2.5 ಲಕ್ಷ ಮೌಲ್ಯದ ಒಡವೆ ದೋಚಿದ್ದರು. ಎರಡೂ ಕಡೆ ಒಂದೇ ತಂಡ ಕೃತ್ಯ ಎಸಗಿರುವುದು ಸಿ.ಸಿ ಟಿ.ವಿ ಕ್ಯಾಮೆರಾಗಳ ಪರಿಶೀಲನೆಯಿಂದ ಗೊತ್ತಾಗಿತ್ತು.

ಏಳು ತಿಂಗಳಿನಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಈ ಮೂವರು, ಗುರುವಾರ ಮಧ್ಯಾಹ್ನ ಒಡವೆಗಳನ್ನು ಸುಂಕದಕಟ್ಟೆಯ ಆಭರಣ ವ್ಯಾಪಾರಿಯೊಬ್ಬರಿಗೆ ಮಾರುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.