ADVERTISEMENT

ಸೈಕಲ್‌ ಸವಾರಿ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2016, 20:08 IST
Last Updated 7 ಫೆಬ್ರುವರಿ 2016, 20:08 IST
ಕಬ್ಬನ್‌ ಉದ್ಯಾನದಲ್ಲಿ ಭಾನುವಾರ ಕಂಡುಬಂದ ಸೈಕಲ್‌ ಪ್ರಿಯರು
ಕಬ್ಬನ್‌ ಉದ್ಯಾನದಲ್ಲಿ ಭಾನುವಾರ ಕಂಡುಬಂದ ಸೈಕಲ್‌ ಪ್ರಿಯರು   

ಬೆಂಗಳೂರು:  ಕಬ್ಬನ್‌ ಉದ್ಯಾನಕ್ಕೆ ವಾರಾಂತ್ಯದಲ್ಲಿ ಅಧಿಕ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುವ ಉದ್ದೇಶ ದಿಂದ ತೋಟಗಾರಿಕಾ ಇಲಾಖೆಯು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಸಹಯೋಗದಲ್ಲಿ ವ್ಯವಸ್ಥೆ ಮಾಡಿರುವ ಉಚಿತ ಸೈಕಲ್‌ ಸವಾರಿ ಇದೀಗ ಉದ್ಯಾನದ ಆಕರ್ಷಣೆಗಳಲ್ಲಿ ಒಂದಾಗಿದೆ.

ಸೈಕಲ್‌ ಸವಾರಿ ಕಲಿಯಬೇಕು ಎನ್ನುವ ತುಡಿತವುಳ್ಳವರ ಉದ್ದನೆಯ ಸರದಿ ಇದೀಗ ಪ್ರತಿ ಭಾನುವಾರ ಸೈಕಲ್‌ ಸ್ಟ್ಯಾಂಡ್‌  ಮುಂದೆ ಕಾಣುತ್ತಿದೆ. ಉದ್ಯಾನದ ಎಲ್ಲೆಡೆ ಪೋಷಕರು ತಮ್ಮ ಮಕ್ಕಳಿಗೆ ಸೈಕಲ್‌ ಸವಾರಿ ಹೇಳಿಕೊಡುವ ದೃಶ್ಯಗಳು ಗೋಚರಿಸುತ್ತದೆ.

ಸಂಚಾರ ಮುಕ್ತ ಉದ್ಯಾನದ ರಸ್ತೆಗಳಲ್ಲಿ ಸೈಕಲ್‌ನೊಂದಿಗೆ ರಜೆಯ ಮೋಜು ಅನುಭವಿಸಲು ಬರುವವರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಲೇ ಇದೆ.
‘ಉಚಿತ ಸೈಕಲ್‌ ಸವಾರಿಗೆ ಆಯೋಜಿಸುತ್ತ ಬರುತ್ತಿರುವ ದಿನಗಳಿಂದಲೂ ನಾವು ನಿಯಮಿತವಾಗಿ ಉದ್ಯಾನಕ್ಕೆ ಬರುತ್ತಿದ್ದೇವೆ. ನನ್ನ ಎರಡು ಮಕ್ಕಳು ಇಲ್ಲಿಯೇ ಸೈಕಲ್‌ ಕಲಿತು ಇದೀಗ ಸ್ವತಂತ್ರರಾಗಿ ಸವಾರಿ ಮಾಡುತ್ತಾರೆ’ ಎಂದು ಹೆಮ್ಮೆ ಹೇಳಿದರು ರಾಜಾಜಿನಗರದ ನಿವಾಸಿ ಸುನೀತಾ.

‘ಭಾನುವಾರ ಉದ್ಯಾನದೊಳಗೆ ವಾಹನಗಳ ಪ್ರವೇಶ ನಿಷೇಧಿಸುತ್ತಿರುವುದರಿಂದ ಇಲ್ಲಿ ಸುರಕ್ಷಿತವಾಗಿ ಸೈಕಲ್‌ ಕಲಿಯಲು ಬರುವವರು ಹೆಚ್ಚಿದ್ದಾರೆ’ ಎಂದು ಇಂದಿರಾನಗರ ನಿವಾಸಿ ನಾಗರಾಜ್‌ ತಿಳಿಸಿದರು.

ಕಳೆದ ಜೂನ್‌ ತಿಂಗಳಿಂದ ಆರಂಭವಾಗಿರುವ ಈ ಉಚಿತ ಸೈಕಲ್‌ ಸೇವೆಯನ್ನು ಈವರೆಗೆ 8,000ಕ್ಕೂ ಅಧಿಕ ಜನರು ಪಡೆದಿದ್ದಾರೆ ಎಂದು ಡಲ್ಟ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.