ADVERTISEMENT

ಸೊಪ್ಪುಗಳ ದರ ದುಪ್ಪಟ್ಟು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:37 IST
Last Updated 18 ಸೆಪ್ಟೆಂಬರ್ 2017, 19:37 IST
ಸೊಪ್ಪುಗಳ ದರ ದುಪ್ಪಟ್ಟು
ಸೊಪ್ಪುಗಳ ದರ ದುಪ್ಪಟ್ಟು   

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆ ಹಾನಿಯಾಗಿದೆ. ಸೊಪ್ಪಿನ ದರಗಳು ಎರಡು ಪಟ್ಟು ಹೆಚ್ಚಿವೆ.

ಮಳೆಗಾಲದಲ್ಲಿ ತರಕಾರಿ ಬೆಲೆ ತುಸು ಕಡಿಮೆ ಆಗುವುದು ವಾಡಿಕೆ. ಆದರೆ, ಈ ಬಾರಿ ಮಳೆಯಿಂದಾಗಿ ಸೊಪ್ಪನ್ನು ಬೆಳೆಯುವ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಯ ತಾಲ್ಲೂಕುಗಳ ಜಮೀನುಗಳಲ್ಲಿ ನೀರು ನಿಂತಿದೆ. ಅಲ್ಲಿ ಬೆಳೆದ ಕೊತ್ತಂಬರಿ, ಪಾಲಕ್‌, ಮೆಂತ್ಯೆ, ದಂಟು, ಪುದೀನಾ, ಸಬ್ಬಕ್ಕಿ, ಪುಂಡೆ ಸೊಪ್ಪಿನ ಫಸಲು ಹಾಳಾಗಿದೆ. ಇದರಿಂದಾಗಿ ನಗರದ ಮಾರುಕಟ್ಟೆಗಳಿಗೆ ಅವುಗಳ ಕೊರತೆ ಕಂಡುಬರುತ್ತಿದೆ.

ಕಳೆದ ತಿಂಗಳು ಪ್ರತಿ ಕಟ್ಟಿಗೆ ₹ 20 ಕ್ಕೆ ಮಾರಾಟವಾಗುತ್ತಿದ್ದ ಕೊತ್ತಂಬರಿ ಸೊಪ್ಪಿನ ದರ ಎರಡೂವರೆ ಪಟ್ಟು ಹೆಚ್ಚಿದೆ. ಪಾಲಕ್‌, ಮೆಂತ್ಯೆ ಸೊಪ್ಪುಗಳ ದರ ದುಪ್ಪಟ್ಟು ಆಗಿದೆ. ₹ 10 ಕ್ಕೆ ಒಂದು ಕಟ್ಟು ಸಿಗುತ್ತಿದ್ದ ದಂಟು, ಪುಂಡೆ, ಪುದೀನಾಗಳ ದರ ಈಗ ₹ 20ಕ್ಕೆ ಹೆಚ್ಚಿದೆ.

ADVERTISEMENT

‘ನಗರದ ಕೆ.ಆರ್‌.ಮಾರುಕಟ್ಟೆ, ರಸೆಲ್‌ ಮಾರುಕಟ್ಟೆಗಳಿಗೆ ಮಾಲೂರು, ಬಂಗಾರಪೇಟೆ, ಚಿಂತಾಮಣಿ, ಶ್ರೀನಿವಾಸಪುರ, ಹೊಸಕೋಟೆ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಿಂದ ಸೊಪ್ಪುಗಳು ಬರುತ್ತವೆ. ಮಳೆಯಿಂದಾಗಿ ಉತ್ತಮ ಗುಣಮಟ್ಟದ ಸೊಪ್ಪು ಬರುತ್ತಿಲ್ಲ’ ಎನ್ನುತ್ತಾರೆ ರಸೆಲ್‌ ಮಾರುಕಟ್ಟೆಯ ತರಕಾರಿ ವ್ಯಾಪಾರಿ ಮುರುಗನ್‌.

‘ಕಟ್ಟಿನಲ್ಲಿ ಒಂದಿಷ್ಟು ಕೊಳೆತ ಎಲೆಗಳಿದ್ದರೂ ಗ್ರಾಹಕರು ಸೊಪ್ಪನ್ನು ಕೊಳ್ಳುತ್ತಿಲ್ಲ. ಇದರಿಂದ ವ್ಯಾಪಾರವೂ ಕುಸಿದಿದೆ’ ಎನ್ನುತ್ತಾರೆ ಅವರು.

‘ವರ್ಷವಿಡೀ ತರಕಾರಿ ದರಗಳು ಹೆಚ್ಚಾಗಿಯೇ ಇರುತ್ತವೆ. ಅವುಗಳನ್ನು ಕೊಂಡು ತಿನ್ನದೇ ಬೇರೆ ದಾರಿಯಿಲ್ಲ’ ಎಂದು ವಸಂತನಗರದ ನಿವಾಸಿ ಸುನಂದಮ್ಮ ಅಳಲು ತೋಡಿಕೊಂಡರು.

‘ಆಗಸ್ಟ್‌ ತಿಂಗಳ ಆರಂಭದಲ್ಲಿ ಕ್ಯಾರೆಟ್‌, ದಪ್ಪಮೆಣಸಿನಕಾಯಿ, ಟೊಮೆಟೊ, ಬೀನ್ಸ್‌ಗಳ ದರ ಕೆ.ಜಿ.ಗೆ ₹ 50ಕ್ಕಿಂತ ಹೆಚ್ಚಿತ್ತು. ಮಳೆಯ ಬಳಿಕ ಈ ತರಕಾರಿಗಳು ಹೆಚ್ಚು ಪೂರೈಕೆ ಆಗುತ್ತಿವೆ. ಬೆಲೆಯೂ ಅರ್ಧದಷ್ಟು ಇಳಿಕೆ ಆಗಿದೆ’ ಎಂದು ವ್ಯಾಪಾರಿ ಜಮೀಲ್‌ ಅಹ್ಮದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.