ADVERTISEMENT

ಸೋರಿಕೆ ತಡೆ– ಸಮರ್ಪಕ ಯೋಜನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:38 IST
Last Updated 18 ಸೆಪ್ಟೆಂಬರ್ 2017, 19:38 IST
ಪ್ರಾಧ್ಯಾಪಕ ಕೃಷ್ಣರಾಜ್‌
ಪ್ರಾಧ್ಯಾಪಕ ಕೃಷ್ಣರಾಜ್‌   

ಬೆಂಗಳೂರು: ‘ನಗರಗಳಿಗೆ ನೀರು ಪೂರೈಸುವ ಜಲಮೂಲಗಳನ್ನು ಸಂರಕ್ಷಿಸಲು ಮತ್ತು ನೀರಿನ ಸೋರಿಕೆ ತಡೆಯಲು ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕು’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ಪ್ರಾಧ್ಯಾಪಕ ಕೃಷ್ಣರಾಜ್‌ ಹೇಳಿದರು.

ಬೆಂಗಳೂರು ಸಮಾಜ ವಿಜ್ಞಾನ ವೇದಿಕೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ನೀರಿನ ಸದ್ಬಳಕೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ನಗರ ಪ್ರದೇಶದಲ್ಲಿ ವಾಸವಿರುವ ವ್ಯಕ್ತಿಯೊಬ್ಬನಿಗೆ ಪ್ರತಿದಿನ 200 ಲೀ. ನೀರು ಒದಗಿಸಬೇಕು. ಆದರೆ, ಜಲಮಂಡಳಿ ಪ್ರತಿ ವ್ಯಕ್ತಿಗೆ 120 ಲೀ. ನೀರನ್ನು ಮಾತ್ರ ಸರಬರಾಜು ಮಾಡುತ್ತಿದೆ. ಕೆಲವು ಕೊಳೆಗೇರಿಗಳು ಮತ್ತು ಹೊರವಲಯದ ಪ್ರದೇಶಗಳಿಗೆ ಇನ್ನೂ ನೀರು ಸರಬರಾಜು ಆಗುತ್ತಿಲ್ಲ’ ಎಂದು ತಿಳಿಸಿದರು.

ADVERTISEMENT

‘2 ಕೋಟಿ ಜನಸಂಖ್ಯೆ ಇರುವ ನ್ಯೂಯಾರ್ಕ್‌ ನಗರಕ್ಕೆ ಮೂರು ಚಿಕ್ಕ ಜಲಾಗಾರಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಅವುಗಳ ಸುತ್ತ ಅರಣ್ಯ ಬೆಳೆಸಲಾಗಿದೆ. ಹಾಗೆಯೇ ಕ್ರಿಮಿನಾಶಕಗಳನ್ನು ಬಳಸಿ ಕೃಷಿ ಮಾಡುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಅಲ್ಲಿನ ನೀರು ಶುದ್ಧವಾಗಿದೆ. ಜಲಾಗಾರಗಳ ನೀರನ್ನು ಸಂಸ್ಕರಣೆ ಮಾಡದೆಯೇ ಸರಬರಾಜು ಮಾಡುತ್ತಾರೆ’ ಎಂದರು.

‘ಪ್ರತಿದಿನ ನಗರಕ್ಕೆ ಸರಬರಾಜು ಆಗುವ ನೀರಿನಲ್ಲಿ 70 ಕೋಟಿ ಲೀಟರ್ ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ವಿದೇಶದ ನಗರಗಳಲ್ಲಿ ನೀರಿನ ಸೋರಿಕೆ ಪ್ರಮಾಣ ಶೇ 15 ರಿಂದ ಶೇ 18 ಇದೆ. ಆದರೆ, ಬೆಂಗಳೂರಿನಲ್ಲಿ ಇದರ ಪ್ರಮಾಣ ಶೇ 48 ರಷ್ಟು ಇದೆ. ನೀರಿನ ಮಾಲಿನ್ಯ, ಅಂತರ್ಜಲ ದುರ್ಬಳಕೆ, ಅವೈಜ್ಞಾನಿಕವಾದ ಒಳಚರಂಡಿ ವ್ಯವಸ್ಥೆಯಿಂದಾಗಿ ನೀರಿನ ಕೊರತೆ ಉಂಟಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.