ADVERTISEMENT

ಸ್ಥಳೀಯರ ಜತೆ ಅಸಹಕಾರ ಭಾವನೆ ಇಲ್ಲ

ತಾಂಜಾನಿಯಾ ಹೈಕಮಿಷನರ್‌ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:57 IST
Last Updated 5 ಫೆಬ್ರುವರಿ 2016, 19:57 IST

ಬೆಂಗಳೂರು: ‘ಸ್ಥಳೀಯರ ಜತೆಗಿನ ಸಣ್ಣ ಘರ್ಷಣೆ ಈ ಘಟನೆಗೆ ಕಾರಣವಾಗಿದೆ. ಇಲ್ಲಿನ ಸ್ಥಳೀಯರ ಅಥವಾ ಪೊಲೀಸರ ಬಗ್ಗೆ ಆಫ್ರಿಕಾ ಪ್ರಜೆಗಳು ಯಾವುದೇ  ಅಸಹಕಾರ ಭಾವನೆ ಹೊಂದಿಲ್ಲ’ ಎಂದು ತಾಂಜಾನಿಯಾ ಹೈಕಮಿಷನರ್‌ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು ಹೇಳಿದರು.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಆಫ್ರಿಕಾದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇದೊಂದು ಆಕಸ್ಮಿಕ ಘಟನೆ. ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧ ನಾವು ಮಾಡಿದ ಮನವಿಗೆ ಭಾರತ ತಕ್ಷಣ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಂಡಿದೆ’ ಎಂದು ತಾಂಜಾನಿಯಾ ಹೈಕಮಿಷನರ್‌ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು ಹೇಳಿದರು.

‘ಬೆಂಗಳೂರು, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಆಫ್ರಿಕಾ ವಿದ್ಯಾರ್ಥಿಗಳು ನೆಲೆಸಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಮಗೂ ಇಲ್ಲಿನ ಕಾನೂನಿನ ಬಗ್ಗೆ ಗೌರವವಿದೆ’ ಎಂದರು.

ಸಂವಾದದಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಡಿಜಿಪಿ ಓಂ ಪ್ರಕಾಶ್‌ ರಾವ್, ಪೊಲೀಸ್ ಕಮಿಷನರ್ ಎನ್‌.ಎಸ್‌. ಮೇಘರಿಕ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು. ಸಂವಾದದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಂಧಿತರೂ ಸಭೆಯಲ್ಲಿದ್ದರು: ತಾಂಜಾನಿಯಾ ಹೈಕಮಿಷನರ್‌ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಂವಾದದಲ್ಲಿ, ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಸುಮಾರು 15 ವಿದ್ಯಾರ್ಥಿಗಳ ಪಾಲ್ಗೊಂಡಿದ್ದರು.

ಮಾದಕ ದ್ರವ್ಯ ವಸ್ತು ಹೊಂದಿದ ಆರೋಪ, ಮದ್ಯಪಾನ ಮಾಡಿ ಹಲ್ಲೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಹೆಣ್ಣೂರು, ಬಾಣಸವಾಡಿ ಹಾಗೂ ಕೊತ್ತನೂರು ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿತರಾಗಿದ್ದ ಸುಮಾರು 15 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ ನನ್ನ ಠಾಣೆ ವ್ಯಾಪ್ತಿಯಲ್ಲೇ ಸುಮಾರು 8 ಮಂದಿಯನ್ನು ಬಂಧಿಸಿದ್ದೆ ಎಂದು ಸ್ಥಳದಲ್ಲಿದ್ದ ಪೂರ್ವ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಭಟನೆ ವಾಪಸ್
‘ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಆಫ್ರಿಕಾ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ (ಫೆ. 6) ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ’ ಎಂದು ಕಿಜಾಜಿ ಅವರು ತಿಳಿಸಿದರು.

ಸಭೆಗೆ ಸೂಚನೆ
‘ಘಟನೆಗೆ ಸಂಬಂಧಿಸಿದಂತೆ ಇನ್ನು ಮುಂದೆ ನಗರದ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಆಫ್ರಿಕಾ ಪ್ರಜೆಗಳ ಸಭೆ ನಡೆಸಿ, ಅವರ ಕುಂದುಕೊರತೆ ಹಾಗೂ ದೂರುಗಳನ್ನು ಆಲಿಸುವಂತೆ ಸೂಚಿಸಲಾಗಿದೆ’ ಎಂದು ಡಿಜಪಿ ಓಂ ಪ್ರಕಾಶ್ ತಿಳಿಸಿದರು.  ಇದೊಂದು ಚಿಕ್ಕ ಘಟನೆ. ಇನ್ನು ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.