ADVERTISEMENT

ಸ್ಥಳ ಪರಿಶೀಲನೆಗೆ ಸೂಚನೆ

ಅಕ್ರಮ ವಾಣಿಜ್ಯ ಮಳಿಗೆ ನಿರ್ಮಾಣ ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:57 IST
Last Updated 4 ಸೆಪ್ಟೆಂಬರ್ 2015, 19:57 IST

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿನ ಭಾರತ್‌ ಗೃಹ ನಿರ್ಮಾಣ ಸಹಕಾರ ಸೊಸೈಟಿಗೆ ಸೇರಿದ ಬಡಾವಣೆಯಲ್ಲಿ ನಾಗರಿಕ ಸೌಲಭ್ಯಕ್ಕೆ ಇರಿಸಿದ್ದ ನಿವೇಶನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಗೆ ಹೈಕೋರ್ಟ್‌ ಆದೇಶಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿತು. ಉತ್ತರಹಳ್ಳಿಯ ರಸ್ತೆಗೆ ಹೊಂದಿಕೊಂಡ ಮುಖ್ಯ ರಸ್ತೆಯಲ್ಲಿ ಪಟ್ಟಾಲಮ್ಮ ದೇವಾಲಯವಿದ್ದು ಇದರ ಸುತ್ತ ಅಕ್ರಮ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ರಾಮಕೃಷ್ಣ ಮತ್ತು ಇತರರು ಈ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು, ಬಿಡಿಎ ಮತ್ತು ಪ್ರತಿವಾದಿಗಳ ಪರ ವಾದ ಆಲಿಸಿದ ಪೀಠವು ಸ್ಥಳ ಪರಿಶೀಲನೆಗೆ ಪ್ಲೀಡರ್‌ ಎಂ.ಐ. ಅರುಣ್‌ ಅವರನ್ನು ಕೋರ್ಟ್‌ ಆಯುಕ್ತರನ್ನಾಗಿ ನೇಮಕ ಮಾಡಿತು. ಕೋರ್ಟ್‌ ಆಯುಕ್ತರ ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದೇ 6ರಂದು ಮಧ್ಯಾಹ್ನ 12 ಗಂಟೆಗೆ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಸ್ಥಳ ಪರಿಶೀಲನೆ ನಡೆಸುವಂತೆ ನ್ಯಾಯಮೂರ್ತಿಗಳು  ಆದೇಶಿಸಿದರು.  ಸ್ಥಳದ ಛಾಯಾಚಿತ್ರಗಳ ಸಮೇತ ಇದೇ 21ರಂದು ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಪರಿಶೀಲನೆ ನಡೆಸುವ ಅಧಿಕಾರಿಗೆ ₹ 7500 ವೇತನ ರೂಪದಲ್ಲಿ ನೀಡಬೇಕು ಎಂದು ಪೀಠವು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.