ADVERTISEMENT

ಸ್ಥಿರಾಸ್ತಿ ಬೆಲೆ ಕುಸಿದಿಲ್ಲ: ಕ್ರೆಡಾಯ್‌

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 19:44 IST
Last Updated 2 ಡಿಸೆಂಬರ್ 2016, 19:44 IST

ಬೆಂಗಳೂರು:  ‘ನೋಟು ರದ್ದತಿಯಿಂದ ರಾಜ್ಯದ ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೆ ಹೇಳಿಕೊಳ್ಳುವಂತಹ ಪರಿಣಾಮ ಆಗಿಲ್ಲ. ಆಸ್ತಿಗಳ ಬೆಲೆ ಶೇ 30ರಷ್ಟು ಕುಸಿದಿದೆ ಎಂಬುದು ತುಂಬಾ ಉತ್ಪ್ರೇಕ್ಷಿತ ಮಾಹಿತಿ’ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘಗಳ ಒಕ್ಕೂಟ (ಕ್ರೆಡಾಯ್‌) ಹೇಳಿಕೊಂಡಿದೆ.

ಕ್ರೆಡಾಯ್‌ನ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶೋಭಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಜೆ.ಸಿ. ಶರ್ಮಾ, ಪ್ರೆಸ್ಟೀಜ್‌ ಗ್ರೂಪ್‌ನ ಅಧ್ಯಕ್ಷ ಇರ್ಫಾನ್‌ ರಜಾಕ್‌, ಬ್ರಿಗೇಡ್‌ ಗ್ರೂಪ್‌ನ ಅಧ್ಯಕ್ಷ ಎಂ.ಆರ್‌. ಜೈಶಂಕರ್‌ ಮತ್ತು ಕ್ರೆಡಾಯ್‌ ಸದಸ್ಯರು ಶುಕ್ರವಾರ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದರು.
‘ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಲಾಭಾಂಶದ ಪ್ರಮಾಣ ಶೇ 10ಕ್ಕಿಂತ ಹೆಚ್ಚಿಲ್ಲ. ದೊಡ್ಡ ಪ್ರಮಾಣದಲ್ಲಿ ದರ ಕಡಿತವನ್ನು ಮಾಡಿ, ನಷ್ಟ ಅನುಭವಿಸಲು ಯಾವ ಕಂಪೆನಿಗಳೂ ತಯಾರಿಲ್ಲ’ ಎಂದು ಹೇಳಿದರು.

‘ನೋಟು ರದ್ದತಿಯಿಂದ ಬೆಂಗಳೂರು ನಗರದ ಉದ್ಯಮಕ್ಕೆ ಹೆಚ್ಚಿನ ಪರಿಣಾಮ ಆಗದಿರಲು ಇಲ್ಲಿನ ಬಹುತೇಕ ವಹಿವಾಟು ಮುಂಚಿನಿಂದಲೂ ಬ್ಯಾಂಕಿಂಗ್‌ ಮೂಲಕ ಆಗುತ್ತಿರುವುದು ಕಾರಣ’ ಎಂದು ತಿಳಿಸಿದರು.

ADVERTISEMENT

‘ಐ.ಟಿ ಹಾಗೂ ಐ.ಟಿ ಸಂಬಂಧಿತ ಸೇವೆಗಳ (ಐಟಿಇಎಸ್‌) ಕ್ಷೇತ್ರದಲ್ಲಿರುವ ಯುವ ವೃತ್ತಿಪರರೇ ನಮ್ಮ ಮುಖ್ಯ ಗ್ರಾಹಕರಾಗಿದ್ದಾರೆ.  ಅಂತಿಮ ಬಳಕೆದಾರರ ಕೇಂದ್ರಿತ ಮಾರುಕಟ್ಟೆ ಇಲ್ಲಿದೆ. ಹೀಗಾಗಿ ಋಣಾತ್ಮಕ ಪರಿಣಾಮ ಆಗಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ನಡೆಯಿಂದ ಇಡೀ ಅರ್ಥವ್ಯವಸ್ಥೆ ಸ್ವಚ್ಛಗೊಳ್ಳಲಿದೆ. ಬ್ಯಾಂಕ್‌ನಲ್ಲಿ ಠೇವಣಿ ಹೆಚ್ಚಾಗಿ, ಗೃಹಸಾಲದ ಬಡ್ಡಿದರ ಇಳಿಯಲಿದೆ. ಆಗ ಖರೀದಿ ಶಕ್ತಿ ಹೆಚ್ಚಲಿದೆ’ ಎಂದು ವಿವರಿಸಿದರು. 

‘ಅನುಮತಿ ನೀಡುವಲ್ಲಿ ಆಗುತ್ತಿರುವ ವಿಳಂಬ, ಹೆಚ್ಚುತ್ತಿರುವ ನಿರ್ಮಾಣ ವೆಚ್ಚ ಮತ್ತಿತರರ ಕಾರಣಗಳಿಂದ ಇತ್ತೀಚಿನ ತಿಂಗಳುಗಳಲ್ಲಿ ಹೊಸ ಯೋಜನೆಗಳಿಗೆ ಚಾಲನೆ ಸಿಕ್ಕಿಲ್ಲ. ಮುಂದಿನ 5–6 ತಿಂಗಳಲ್ಲಿ ಬೇಡಿಕೆ ಹೆಚ್ಚಲಿದ್ದು, ಅದಕ್ಕೆ ತಕ್ಕಷ್ಟು  ಪೂರೈಕೆ ಸಾಧ್ಯವಾಗದೆ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.