ADVERTISEMENT

ಸ್ವಾಮಿ ನಮ್ಮ ಗೋಳು ಯಾರು ಕೇಳ್ತಾರೆ?

ಈರಪ್ಪ ಹಳಕಟ್ಟಿ
Published 31 ಆಗಸ್ಟ್ 2014, 19:55 IST
Last Updated 31 ಆಗಸ್ಟ್ 2014, 19:55 IST

ಬೆಂಗಳೂರು: ‘ಇಗಾ ನೀವೇ ನೋಡಿ, ಸಿಗ್ನಲ್ ಬಿತ್ತಾ. ಬೈಕ್‌ನವರೆಲ್ಲ ಹೆಂಗ್ ಸೈಡಿಗೆ ಬರ್ತಾರೆ. ಹಿಂಗಾದ್ರೆ ನಮ್ಮಂತ ವಯಸ್ಸಾದೋರು ನಡೆದಾಡೊದು ಹೆಂಗೆ? ಅಕಾ, ಅದರ ಮೇಲೆ ನಮ್ಮಂತವರು ಹತ್ತೋಕ್ಕೆ ಆಗತ್ತಾ? ನಮ್ಮ ಗೋಳು ಯಾರು ಕೇಳ್ತಾರೆ ಸ್ವಾಮಿ, ನಮ್ಮ ಕರ್ಮ ಅನ್ಬೋಸ್ಬೆಕಷ್ಟೆ’ ಎನ್ನುತ್ತ ಏದುಸಿರು ತಡೆಹಿಡಿದು, ಮುನಿಸಿ­ಕೊಂಡ­ವರಂತೆ ಬೆನ್ನು ತಿರುಗಿಸಿ ಮುಗ್ಗರಿಸುತ್ತ ಹೊರಟು ಹೋದರು 73 ವಯಸ್ಸಿನ ಕುರುಬರಹಳ್ಳಿ ನಿವಾಸಿ ಮುನಿಸ್ವಾಮಿ.

ಪಾದಚಾರಿ ಮಾರ್ಗದ ಸಮಸ್ಯೆಗೆ ಅರಿ­ಯುವ ನಿಟ್ಟಿನಲ್ಲಿ ನಗರದ ಮಲ್ಲೇಶ್ವರ­ದಲ್ಲಿ­ರುವ ಕೆ.ಸಿ.­ಜನರಲ್ ಆಸ್ಪತ್ರೆ ಮುಂಭಾಗ­­ದಿಂದ ಕುವೆಂಪು ರಸ್ತೆ ಮೂಲಕ ನವರಂಗ್‌ ಮೆಟ್ರೊ ಪ್ಲೈಓವರ್‌­ವರೆಗೆ ಹೆಜ್ಜೆ ಹಾಕಿದ ವೇಳೆ ನವರಂಗ್ ಚಿತ್ರ­ಮಂದಿರದ ಸಮೀಪ  ಮಾತಿಗೆ ಸಿಕ್ಕವರು ಮುನಿಸ್ವಾಮಿ.

ಅವರ ಹತಾಶೆಯ ಮಾತು ನಗರದ ವೃದ್ಧರೆಲ್ಲ ನಿತ್ಯ ಪಾದಚಾರಿ ಮಾರ್ಗದಲ್ಲಿ ಅನುಭವಿಸುತ್ತಿರುವ ಸಂಕಷ್ಟದ ಮಾರ್ದ­ನಿಯಂತಿತ್ತು.
ಕೆ.ಸಿ.ಜನರಲ್ ಆಸ್ಪತ್ರೆಯಿಂದ ನವರಂಗ್ ಕಡೆಗೆ ಎಡಬಲ ಇರುವ ಪಾದಚಾರಿ ಮಾರ್ಗಗಳ ಮೇಲೆ ದೃಷ್ಟಿನೆಟ್ಟು ಸಾಗಲು ಮುಂದಾದರೆ ಒಂದೊಮ್ಮೆ ಎಡಬದಿಯ ಮಾರ್ಗದಲ್ಲಿರುವ ಕೆಲ ಅಂಗಡಿಗಳ ನಡುವೆ ನುಸುಳಿ ಮುಂದೆ ಸಾಗಬಹುದು.  ಆದರೆ, ಅತ್ತ ಬಲಬದಿ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಇರುವ ಮಾರ್ಗಕ್ಕೆ   ಸಂಚಾರ ಸುಗಮಗೊಳಿಸುವ ಹೊಣೆಹೊತ್ತ ಸಂಚಾರಿ ಪೊಲೀಸರೇ ಸಂಚಕಾರ ತಂದಿದ್ದಾರೆ.

ಇಲ್ಲಿರುವ ಎರಡು ಬಸ್‌ ತಂಗುದಾಣಗಳ ಪೈಕಿ ಒಂದನ್ನು ಗುತ್ತಿಗೆ ಪಡೆದವರಂತೆ ಚಪ್ಪರದ ತೆಂಗಿನ ಗರಿ ಗಳನ್ನು ಹೆಣೆಯು­ವವರು ರಾಜಾರೋಷವಾಗಿ ಅತಿಕ್ರಮಿಸಿಕೊಂಡಿದ್ದಾರೆ. ಅದರ ಪಕ್ಕದ ಪಾದಚಾರಿ ಮಾರ್ಗದಲ್ಲಿ ತಳ್ಳುಗಾಡಿಯಾತ ಟೆಂಟ್ ಹೊಡೆದು ಭರ್ಜರಿ ಹೋಟೆಲ್ ನಡೆಸುತ್ತಾನೆ. ಅದರಾಚೆಗೆ ಇರುವ ಮತ್ತೊಂದು ತಂಗುದಾಣಕ್ಕೆ ಏಣಿ ಹಾಕಿ ಏರಬೇಕಾದ ಸ್ಥಿತಿ­ಯಿದೆ. ವೃದ್ಧರು ಮತ್ತು ಮಕ್ಕಳು ಇಲ್ಲಿ ಸುಲಭವಾಗಿ ಹತ್ತಲು ಸಾಧ್ಯವಿಲ್ಲ.

ಮುಂದೆ ಮಹಾಕವಿ ಕುವೆಂಪು ವೃತ್ತ ದಾಟಿ ಕಿರಿದಾದ ಅಸ್ತವ್ಯಸ್ತವಾಗಿರುವ ಪಾದಚಾರಿ ಮಾರ್ಗದ ಮೂಲಕ ಸಾಗುವಾಗ ಕಸದ ರಾಶಿ ಎದುರಾಗುತ್ತದೆ. ರೈಲ್ವೆ ಮೇಲ್ಸೇತುವೆಯನ್ನು ದಾಟಿ ಇಳಿಜಾರಿನಲ್ಲಿ ಸಾಗಿದಾಗ ಕೊನೆಗೆ ಧುಮುಕಿ ರಸ್ತೆಗಿಳಿಯಬೇಕಾದ ಸ್ಥಿತಿ ಇದೆ.
ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿ ಪಾದಚಾರಿ ಮಾರ್ಗದತ್ತ ಕಣ್ಣು ಹಾಯಿಸಿದರೆ, ಅಲ್ಲಿ ಒಂದು ಮರಳಿನ ರಾಶಿ ಮತ್ತು ಬಾಯ್ತೆರೆದು ನಿಂತ ವಿದ್ಯುತ್ ಪೆಟ್ಟಿಗೆ ಪೂರ್ತಿಯಾಗಿ ಅದನ್ನು ಆವರಿಸಿಕೊಂಡದ್ದು ಗೋಚರಿಸುತ್ತದೆ.

ಅದನ್ನು ದಾಟಿಕೊಂಡು ಮುಂದೆ ಸಿಗುವ ಪಾದಚಾರಿ ಮಾರ್ಗ ಏರಿದರೆ ವಿದ್ಯುತ್ ಪೆಟ್ಟಿಗೆಯೊಂದು ಎದುರಾಗುತ್ತದೆ. ಈ ದಾರಿ ಕೂಡ ಅಷ್ಟೇನೂ ಸುಸ್ಥಿತಿಯಲ್ಲಿ ಇಲ್ಲ. ಹಾಗೇ, ನಡೆದು ಶ್ರೀರಾಮಪುರ ಮೆಟ್ರೊ ನಿಲ್ದಾಣ ದಾಟಿದರೆ ಕಿತ್ತು ಹೋದ ಕಲ್ಲು ಮತ್ತು ಮೂರು ವಿದ್ಯುತ್‌ ಪೆಟ್ಟಿಗೆಗಳೊಂದಿಗೆ ಮತ್ತೆ ಅದೇ ಹಾಳಾದ ಫುಟ್‌ಪಾತ್ ದರ್ಶನ. ಅದರಲ್ಲಿ ಕುಂಟುತ್ತಾ ಸಾಗಿ ಸಾಕಾಗಿ ಕೆಳಕ್ಕೆ ಇಳಿದರೆ ಮುಂದೆ ಸುಮಾರು 250 ಮೀಟರ್ ಜೀವ ಕೈಯಲ್ಲಿ ಹಿಡಿದು ರಸ್ತೆ ಪಕ್ಕವೇ ಹೆಜ್ಜೆ ಹಾಕಬೇಕಾದ ಸ್ಥಿತಿ.

ಇನ್ನೂ, ಹರಿಶ್ಚಂದ್ರ ಘಾಟ್ ಸ್ಮಶಾನದ ಉದ್ದಕ್ಕೂ ಎಡಬಲದಲ್ಲಿ ಇರುವ ಪಾದಚಾರಿ ಮಾರ್ಗಗಳು ನರಕದ ರಹದಾರಿಯಂತೆ ತೋರುತ್ತವೆ. ಅಲ್ಲಿ ಬಸ್‌ ನಿಲ್ದಾಣಗಳು ಪೂರ್ತಿಯಾಗಿ ಫುಟ್‌­ಪಾತ್ ಅನ್ನು ಆಪೋಶನ ಮಾಡಿಕೊಂಡಿವೆ. ಅದನ್ನು ದಾಟಿ ಫುಟ್‌ಪಾತ್ ಹತ್ತಿದರೆ ಅಲ್ಲಿ ವಿದ್ಯುತ್ ಪೆಟ್ಟಿಗೆ ಜತೆಗೆ ತ್ಯಾಜ್ಯದ ರಾಶಿ ಮೂಗು ಮುಚ್ಚಿಕೊಂಡು ಹೋಗಿ ಎಂದು ಸ್ವಾಗತಿಸುತ್ತದೆ. ಹಾಗೇ ನಡೆದರೆ ಮುಂದೆ ಕಾಣುವ ಎರಡು ವಿದ್ಯುತ್ ಪೆಟ್ಟಿಗೆಗಳ ಪೈಕಿ ಒಂದು ಉರುಳಿ ಮೈಮೇಲೆ ಬೀಳು­ತ್ತೆನೋ ಎನ್ನುವಷ್ಟು ದಾರಿಯಲ್ಲಿ ವಾಲಿ ನಿಂತಿದೆ.
ಮತ್ತೆ ಹಾಳಾದ ಪಾದಚಾರಿ ಮಾರ್ಗದಲ್ಲಿ ಮುನ್ನಡೆದರೆ ನಡುದಾರಿಯಲ್ಲಿಯೇ ತ್ಯಾಜ್ಯದ ರಾಶಿಗೆ ಕಾಗೆಗಳೊಂದಿಗೆ ಪೈಪೋಟಿ ನಡೆಸಿದ ಹಸುಗಳು ದೂರ ಸರಿದು ಹೋಗಿ ಎನ್ನುವಂತೆ ನೋಡುತ್ತವೆ. ಮತ್ತೆ ಪಾದಚಾರಿಗೆ ರಸ್ತೆಯೇ ಗತಿ.

ಅತ್ತ ಬಲಬದಿಯ ಪಾದಚಾರಿ ಮಾರ್ಗ ಕೂಡ ಅಷ್ಟೊಂದು ಚೆನ್ನಾಗಿಲ್ಲ. ಕಿರಿದಾಗಿದೆ. ಅಲ್ಲಲ್ಲಿ ತ್ಯಾಜ್ಯ ಮತ್ತು ಒಡೆದ ಕಟ್ಟಡದ ಅವಶೇಷಗಳು ಸುರಿದದ್ದು ಕಂಡುಬರುತ್ತದೆ. ಬಲಬದಿಯಲ್ಲಿ ಅಡೆತಡೆಗಳನ್ನು ದಾಟಿಕೊಂಡು ಕಾಲುದಾರಿಗೆ ಏರಿದರೆ ‘ನಿಲ್ಲಿ’ ಎನ್ನುವಂತೆ ಡಿಜಿಟಲ್ ಮೀಟರ್ ಮತ್ತು ಐಸ್‌ಕ್ರೀಂ ಮಳಿಗೆಗಳ ಫಲಕಗಳು ನಡೆದಾರಿಗೆ ಬಂದು ನಿಂತಿವೆ.

ಅವುಗಳನ್ನು ದಾಟಿಕೊಂಡು ನಡೆದರೆ ಕುವೆಂಪು ಮೆಟ್ರೊ ನಿಲ್ದಾಣದಲ್ಲಿ ಇನ್ನೂ  ಅಪೂರ್ಣವಾದ ಪಾದಚಾರಿ ಮಾರ್ಗ ಸ್ವಾಗತಿಸುತ್ತದೆ. ಬಲಬದಿಯಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆ ತಂದ ಸಿಮೆಂಟ್ ಇಟ್ಟಿಗೆಗಳನ್ನು ದಾರಿಗೆ ಅಡ್ಡ ಇಡಲಾಗಿದೆ. ಅದನ್ನು ಹಾಯ್ದು ಮುನ್ನಡೆದರೆ, ಎಡಗಡೆಗೆ ಇರುವ ಗಾಯತ್ರಿ ದೇವಿ ಉದ್ಯಾನದ ಉದ್ದಕ್ಕೂ ಇರುವ ಅಸ್ತವ್ಯಸ್ತ ಕಾಲುದಾರಿಯಲ್ಲಿ ಹೊದಿಕೆಯ ಕಲ್ಲುಗಳು ಸಡಿಲಗೊಂಡಿವೆ. ಕುಲುಕಾಡುವ ಕಲ್ಲುಗಳ ಮೇಲೆ ವೃದ್ಧರಲ್ಲ ಯುವಕರೂ ನಡೆಯಲು ಸಾಧ್ಯವಿಲ್ಲ. ಬಲಬದಿಯ ದಾರಿಯಲ್ಲಿ ಮೂರು ವಿದ್ಯುತ್ ಬಾಕ್ಸ್‌ಗಳು ದಾರಿಯಲ್ಲಿಯೇ ಇವೆ.

ಒಂದು ಬಾಕ್ಸ್ ಅಂತೂ ವಾಲಿಕೊಂಡು ಪಾದಚಾರಿಗಳ ಮೇಲೆ ಬೀಳುತ್ತದೆಯೆನೋ ಎನ್ನುವಂತೆ ಭಾಸವಾಗುತ್ತದೆ. ಎಡಗಡೆ ಮಾರ್ಗದಲ್ಲಿ ಎಂಕೆಕೆ ಅಡ್ಡ ರಸ್ತೆ ದಾಟುತ್ತಿದ್ದಂತೆ ಬಲಮುರಿ ಗಣಪತಿ ಮತ್ತು ವೀರಾಂಜನೇಯ ದೇವಸ್ಥಾನದ ಪಕ್ಕದ ಮರವೊಂದು ಇಡಿಯಾಗಿ ಪಾದಚಾರಿ ಮಾರ್ಗ ನುಂಗಿ ಹಾಕಿದೆ. ಅದನ್ನು ದಾಟಿಕೊಂಡು  ರಸ್ತೆಗುಂಟ ಪಾದಚಾರಿ ಮಾರ್ಗ ತಡಕಾಡುತ್ತ ನಡೆದರೆ ಕೆಲವೆಡೆ ಸಂಪೂರ್ಣವಾಗಿ ಕಾಣೆಯಾಗಿ, ಮಳಿಗೆಗಳು ರಸ್ತೆಗೆ ಬಂದಿರುವುದು ಗೋಚರಿಸುತ್ತದೆ.

ಅತ್ತ, ಬಲಬದಿಯಲ್ಲಿ ಕಿರಿದಾದ ಕಾಲುದಾರಿ ಇದ್ದು, ಅದರ ಉದ್ದಕ್ಕೂ ಮೂರು ವಿದ್ಯುತ್ ಪೆಟ್ಟಿಗೆಗಳನ್ನು ಪ್ರತಿಷ್ಠಾಪಿಸಿದ್ದು ಪಾದಚಾರಿಗಳಿಗೆ ತೊಂದರೆ ಉಂಟು ಮಾಡುವಂತಿದೆ.ಅಡೆತಡೆಗಳನ್ನು ದಾಟಿಕೊಂಡು ಕಿರಿದಾದ ಪಾದಚಾರಿ ಮಾರ್ಗದ ಮೂಲಕ ನಡೆದು ನವರಂಗ್ ವೃತ್ತ ದಾಟಲಾಯಿತು. ನವರಂಗ್ ಚಿತ್ರಮಂದಿರದ ಎದುರು ಸೌತೆಕಾಯಿ ಮತ್ತು ಮುಸುಕಿನ ಜೋಳ ಮಾರುವ ತಳ್ಳುಗಾಡಿಗಳು ಫುಟ್‌ಪಾತ್ ಆವರಿಸಿಕೊಂಡದ್ದು ಗೋಚರಿಸಿತು. ಹಾಗೇ, ಮುಂದೆ ನಡೆದರೆ ಉಡುಪ ಫಾಸ್ಟ್‌ಪುಡ್‌ ಮುಂದೆ ಪಾದಚಾರಿ ಮಾರ್ಗದ ಕಲ್ಲೊಂದು ಕಿತ್ತು ಹೋಗಿದೆ.ಬಲಬದಿಯಲ್ಲಿ, ಕಟ್ಟಡ ನಿರ್ಮಾಣ  ನಡೆದಿದ್ದು, ಅಲ್ಲಿ ಇಡೀ ಫುಟ್‌ಪಾತ್ ಛಿದ್ರಗೊಂಡಿದೆ.

ಎಡಬದಿಯಲ್ಲಿ ಕೂಡ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ತಂದು ಸುರಿದ ಜಲ್ಲಿಕಲ್ಲು, ಮರಳು ಮತ್ತು ಕಬ್ಬಿಣ ದಾರಿಯುದ್ದಕ್ಕೂ ಗೋಚರಿಸುತ್ತದೆ. ಇಲ್ಲಿ ಪಾದಚಾರಿಗಳ ಪಾಡು ದೇವರಿಗೆ ಪ್ರೀತಿ. ಸಿಗ್ನಲ್‌ನಲ್ಲಿ ರಸ್ತೆಗಿಳಿದು ವಾಹನಗಳೊಂದಿಗೆ ಪೈಪೋಟಿ ನಡೆಸಬೇಕಾದ ಸ್ಥಿತಿ ಇದೆ. ಅತ್ತ ಬಲಗಡೆ ಸಂಪೂರ್ಣವಾಗಿ ಫುಟ್‌ಪಾತ್ ಮಾಯವಾಗಿದೆ. ಸಿಗ್ನಲ್ ಬಿದ್ದಾಗ ಬೈಕ್‌ ಸವಾರರೆಲ್ಲ ಅಲ್ಲಿ ಪಾದಚಾರಿಗಳಿಗೂ ದಾರಿ ಬಿಡದಂತೆ ಆ ದಾರಿಯನ್ನು ಇಡಿಯಾಗಿ ಆವರಿಸಿಕೊಳ್ಳುತ್ತಾರೆ. ಇಲ್ಲಿ ವಾಹನಗಳು ಮುಂದೆ ಚಲಿಸುವುದನ್ನೇ ಕಾಯುತ್ತ ಮುನಿಸ್ವಾಮಿಯಂತಹ ಹಿರಿಯ ಜೀವಗಳು ಪರಿತಪಿಸುತ್ತ ನಿಲ್ಲುವುದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT