ADVERTISEMENT

ಹಣದಾಸೆಗೆ ಬುದ್ಧಿಮಾಂದ್ಯ ಮಕ್ಕಳ ಮಾರಾಟ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:44 IST
Last Updated 12 ಡಿಸೆಂಬರ್ 2017, 19:44 IST
ಲೋಕೇಶ್
ಲೋಕೇಶ್   

ಬೆಂಗಳೂರು: ಸರ್ಕಾರದ ಅನುದಾನ ಪಡೆಯುವ ಉದ್ದೇಶದಿಂದ, ಅನಾಥಾಶ್ರಮ‌ಗಳಿಗೆ ಕೊಳೆಗೇರಿ ಪ್ರದೇಶಗಳ ಅನಾಥ ಹಾಗೂ ಬುದ್ಧಿಮಾಂದ್ಯ ಮಕ್ಕಳನ್ನು ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ‘ಬ್ರೈಟ್ ಸೇವಾ ಫೌಂಡೇಷನ್’ ಸ್ವಯಂ ಸೇವಾ ಸಂಸ್ಥೆಯ ಮೇಲ್ವಿಚಾರಕ ಸೇರಿ ಮೂವರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.

ಬ್ರೈಟ್ ಸಂಸ್ಥೆಯ ಲೋಕೇಶ್ ನಾಯಕ್, ಖಾಸಗಿ ಕಂಪೆನಿಗಳಿಗೆ ಸ್ವಚ್ಛತಾ ಕೆಲಸಗಾರರನ್ನು ಪೂರೈಸುವ ‘ಎಲ್‌.ಎನ್‌.ಆರ್‌ ಎಂಟರ್‌ಪ್ರೈಸಸ್’ ಮಾಲೀಕ ರೇವಣಸಿದ್ಧೇಶ್ವರ ಅಲಿಯಾಸ್ ರಘು ಹಾಗೂ ಯಲಹಂಕ ಉಪನಗರದಲ್ಲಿರುವ ‘ವಿದ್ಯಾರಣ್ಯ ಎಜುಕೇಷನ್ ಸೊಸೈಟಿ’ಯ ಶಿಕ್ಷಕಿ ಸಿದ್ಧಗಂಗಮ್ಮ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಖಾಸಗಿ ಸುದ್ದಿ ವಾಹಿನಿಯೊಂದರ ಸಹ ಸಂಪಾದಕರು ಭಾನುವಾರ ದೂರು ಕೊಟ್ಟಿದ್ದರು.

ಹೇಗೆ ಕಾರ್ಯಾಚರಣೆ: ಆರೋಪಿಗಳು ಕೆಲ ದಿನಗಳಿಂದ ಇಂಥ ದಂಧೆಯಲ್ಲಿ ತೊಡಗಿದ್ದ ವಿಚಾರ ತಿಳಿದ ವಾಹಿನಿಯ ಪ್ರತಿನಿಧಿಗಳು, ಮಾರುವೇಷದ ಕಾರ್ಯಾಚರಣೆ ನಡೆಸಿದ್ದರು.

ADVERTISEMENT

ಡಿ.9ರಂದು ಆರೋಪಿ ರಘುನನ್ನು ಹೋಟೆಲ್‌ವೊಂದಕ್ಕೆ ಕರೆಸಿಕೊಂಡಿದ್ದ ವಾಹಿನಿ ಪ್ರತಿನಿಧಿಗಳು, ‘ಡಿ.11ರಂದು ಚಿಕ್ಕಮಗಳೂರಿನ ಅನಾಥಾಶ್ರಮವೊಂದರಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಮೂರ್ನಾಲ್ಕು ಸಚಿವರು ಅತಿಥಿಗಳಾಗಿ ಬರುತ್ತಿದ್ದಾರೆ. ಆದರೆ, ಅನಾಥಾಶ್ರಮದಲ್ಲಿ ಮಕ್ಕಳೇ ಇಲ್ಲ. ಹೀಗಾಗಿ, ಒಂದು ದಿನದ ಮಟ್ಟಿಗೆ 25 ಮಕ್ಕಳನ್ನು ನಮ್ಮೊಂದಿಗೆ ಕಳುಹಿಸಿ ಕೊಡಿ. ಅವರನ್ನು ತೋರಿಸಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದರು.

ಈ ಮಾತನ್ನು ನಂಬಿದ ರಘು, ಬ್ರೈಟ್ ಸಂಸ್ಥೆಯ ಲೋಕೇಶ್ ಜತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದ. ಮರುದಿನ ಬೆಳಿಗ್ಗೆ ಆರೋಪಿಗಳನ್ನು ಪುನಃ ಭೇಟಿಯಾದಾಗ, ‘ನಮ್ಮ ಬಳಿ ಮೂರು ವರ್ಗದ ಮಕ್ಕಳಿದ್ದಾರೆ.

‘ಎ’ ವರ್ಗವೆಂದರೆ ಬುದ್ಧಿವಂತ ಮಕ್ಕಳು. ‘ಬಿ’ ವರ್ಗವೆಂದರೆ ನಿರ್ಗತಿಕ ಹಾಗೂ ಅನಾಥ ಮಕ್ಕಳು. ‘ಸಿ’ ವರ್ಗವೆಂದರೆ ಬುದ್ಧಿಮಾಂದ್ಯ ಮಕ್ಕಳು. ನೀವು ಯಾವ ವರ್ಗದವರನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅವರನ್ನು ಕಳುಹಿಸಿಕೊಡುತ್ತೇವೆ’ ಎಂದು ಹೇಳಿದ್ದರು. ಅಲ್ಲದೆ, ಬುದ್ಧಿಮಾಂದ್ಯ ಮಕ್ಕಳನ್ನು ಕರೆದುಕೊಂಡು ಹೋದರೆ ಹೆಚ್ಚು ಅನುದಾನ ಸಿಗುತ್ತದೆ ಎಂಬ ಸಲಹೆಯನ್ನೂ ಕೊಟ್ಟಿದ್ದರು.

ದಿನಕ್ಕೆ ₹ 1,500: ಆರೋಪಿಗಳ ಸಲಹೆಯಂತೆಯೇ ವಾಹಿನಿ ಪ್ರತಿನಿಧಿಗಳು ‘ಸಿ’ ವರ್ಗವನ್ನೇ ಆಯ್ಕೆ ಮಾಡಿಕೊಂಡಿದ್ದರು. ಒಂದು ಮಗುವಿಗೆ ₹ 1,500ರಂತೆ 25 ಮಕ್ಕಳಿಗೆ ದಿನಕ್ಕೆ ₹ 37,500 ದರ ನಿಗದಿ ಮಾಡಿದ್ದ ಆರೋಪಿಗಳು, ‘ಸೋಮವಾರ ಬೆಳಿಗ್ಗೆ 9 ಗಂಟೆಗೆ ಮಕ್ಕಳನ್ನು ಕರೆದುಕೊಂಡು ಯಲಹಂಕ ಉಪನಗರದ ಶೇಷಾದ್ರಿಪುರ ಕಾಲೇಜು ಬಳಿ ಬರುತ್ತೇವೆ. ನೀವೂ ಹಣ ಹೊಂದಿಸಿಕೊಂಡು ಅಲ್ಲಿಗೆ ಬನ್ನಿ’ ಎಂದಿದ್ದರು.

ಈ ಎಲ್ಲ ಮಾತುಕತೆಯನ್ನು ವಿಡಿಯೊ ರೆಕಾರ್ಡ್ ಕೂಡ ಮಾಡಿಕೊಂಡಿದ್ದ ವಾಹಿನಿ ಪ್ರತಿನಿಧಿಗಳು, ಅದರ ಸಿ.ಡಿ.ಯನ್ನು ಭಾನುವಾರ ರಾತ್ರಿಯೇ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್‌ ಸಿಂಗ್ ಅವರಿಗೆ ಕೊಟ್ಟಿದ್ದರು. ಅದನ್ನು ಪರಿಶೀಲಿಸಿದ ಅವರು, ಆರೋಪಿಗಳ ಬಂಧನಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಮಕ್ಕಳನ್ನು ಪೂರೈಸುವುದಾಗಿ ಒಪ್ಪಿಕೊಂಡ ಬಳಿಕ ಲೋಕೇಶ್ ಹಾಗೂ ರಘು, ‘ವಿದ್ಯಾರಣ್ಯ ಎಜುಕೇಷನ್ ಸೊಸೈಟಿ’ಯ ಶಿಕ್ಷಕಿ ಸಿದ್ಧಗಂಗಮ್ಮ ಅವರನ್ನು ಭೇಟಿಯಾಗಿದ್ದರು. ಅವರಿಗೆ ಹಣದ ಆಮಿಷ ತೋರಿಸಿ, ಅಲ್ಲಿದ್ದ ಬುದ್ಧಿಮಾಂದ್ಯ ಮಕ್ಕಳನ್ನು ಚಿಕ್ಕಮಗಳೂರಿಗೆ ಕಳುಹಿಸಿಕೊಡಲು ನಿರ್ಧರಿಸಿದ್ದರು.

ಟಿ.ಟಿಯಲ್ಲಿ ಬಂದ ಪೊಲೀಸರು: ವಾಹಿನಿ ಪ್ರತಿನಿಧಿಗಳ ಸುಳಿವು ಆಧರಿಸಿ ಪೊಲೀಸರು ಕಾರ್ಯಕ್ರಮ ಆಯೋಜಕರ ವೇಷದಲ್ಲಿ ಸೋಮವಾರ ಬೆಳಿಗ್ಗೆ ಟೆಂಪೊ ಟ್ರಾವೆಲರ್‌ನಲ್ಲಿ ಶೇಷಾದ್ರಿಪುರ ಕಾಲೇಜು ಬಳಿ ತೆರಳಿದ್ದರು. ಆಗ ಆರೋಪಿಗಳು ಬುದ್ಧಿಮಾಂದ್ಯ ಮಕ್ಕಳನ್ನು ಆ ವಾಹನಕ್ಕೆ ಹತ್ತಿಸಿದ್ದರು. ಈ ಹಂತದಲ್ಲಿ ಲೋಕೇಶ್ ಹಾಗೂ ರಘುನನ್ನು ಬಂಧಿಸಿದ ಪೊಲೀಸರು, ಅವರು ನೀಡಿದ ಮಾಹಿತಿ ಆಧರಿಸಿ ಸಿದ್ಧಗಂಗಮ್ಮ ಅವರನ್ನೂ ವಶಕ್ಕೆ ಪಡೆದರು.

20 ಮಕ್ಕಳು ಎಲ್ಲಿ ಹೋದವು?
‘ವಂಚನೆ (ಐಪಿಸಿ 420) ಹಾಗೂ ಜೀತಕ್ಕಾಗಿ ಮಕ್ಕಳನ್ನು ಖರೀದಿಸಿದ (370) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ’ ಎಂದು ಯಲಹಂಕ ಉಪನಗರ ಪೊಲೀಸರು ತಿಳಿಸಿದ್ದಾರೆ.

‘ವಿದ್ಯಾರಣ್ಯ ಸೊಸೈಟಿ ಆಶ್ರಯದಲ್ಲಿ ಕಳೆದ ವರ್ಷ 51 ಬುದ್ಧಿಮಾಂದ್ಯ ಮಕ್ಕಳು ಇದ್ದರು. ಈಗ ಆ ಸಂಖ್ಯೆ 31ಕ್ಕೆ ಇಳಿದಿದೆ. ಉಳಿದ 20 ಮಕ್ಕಳ ನಾಪತ್ತೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.