ADVERTISEMENT

ಹಸಿಕರಗ: ದ್ರೌಪದಿ ದೇವಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 20:03 IST
Last Updated 9 ಏಪ್ರಿಲ್ 2017, 20:03 IST
ಹಸಿಕರಗ: ದ್ರೌಪದಿ ದೇವಿ ಆಹ್ವಾನ
ಹಸಿಕರಗ: ದ್ರೌಪದಿ ದೇವಿ ಆಹ್ವಾನ   
ಬೆಂಗಳೂರು:  ಕರಗ ಮಹೋತ್ಸವದ ಏಳನೇ ದಿನವಾದ ಭಾನುವಾರ ಮಧ್ಯರಾತ್ರಿ ನಗರದ ಸಂಪಂಗಿ ಕೆರೆಯಲ್ಲಿ ಇರುವ ಹಸಿಕರಗ ಮಂಟಪದಲ್ಲಿ ಅರ್ಚಕ ಎ.ಜ್ಞಾನೇಂದ್ರ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
 
ತಿಗಳರ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು  ಅನುಸರಿಸಿದ ಅವರು, ‘ದ್ರೌಪದಿ ದೇವಿ’ಯನ್ನು ಆಹ್ವಾನ ಮಾಡಿಕೊಂಡರು. ಬಳಿಕ ಹಸಿಕರಗವನ್ನು ಬಿಬಿಎಂಪಿ ಕಚೇರಿ ಬಳಿ ಇರುವ ಏಳುಸುತ್ತಿನ ಕೋಟೆಗೆ ತರಲಾಯಿತು. ಅಲ್ಲಿ ಪೂಜೆ ನೆರವೇರಿಸಿದ ಬಳಿಕ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯಕ್ಕೆ ತರಲಾಯಿತು.
 
ಹಸಿಕರಗದ ಹಿನ್ನೆಲೆ: ‘ಕುರುಕ್ಷೇತ್ರ ಯುದ್ಧಾನಂತರ ಪಾಂಡವರ ಸ್ವರ್ಗಾರೋಹಣ ಸಂದರ್ಭದಲ್ಲಿ ಪತಿಗಳನ್ನು ಹಿಂಬಾಲಿಸುತ್ತಿದ್ದ ದ್ರೌಪದಿಯನ್ನು ತಿಮಿರಾಸುರನೆಂಬ ರಾಕ್ಷಸ ಪೀಡಿಸುತ್ತಾನೆ. ಸಂಕಷ್ಟದಿಂದ ಪಾರು ಮಾಡುವಂತೆ ದ್ರೌಪದಿ ಕೃಷ್ಣನನ್ನು ಪ್ರಾರ್ಥಿಸುತ್ತಾಳೆ.
 
ರಾಕ್ಷಸನನ್ನು ಸಂಹಾರ ಮಾಡುವ ಶಕ್ತಿ ನಿನ್ನಲ್ಲೇ ಇದೆ ಎಂದು ದ್ರೌಪದಿಗೆ ಕೃಷ್ಣ ತಿಳಿಸುತ್ತಾನೆ. ಆಗ ದ್ರೌಪದಿ ಒಂದು ಪಡೆಯನ್ನು ರೂಪಿಸುತ್ತಾಳೆ’ ಎಂದು ಕರಗ ಉತ್ಸವ ಸಮಿತಿಯ ಸದಸ್ಯ ಎಂ.ಕೆ.ಗುಣಶೇಖರ್‌  ತಿಳಿಸಿದರು.
 
‘ಆಗ ಸೃಷ್ಟಿಯಾದವರೇ ಗಣಾಚಾರಿಗಳು, ಗಂಟೆ–ಪೂಜಾರಿಗಳು, ವೀರಕುಮಾರರು. ಇವರು ರಾಕ್ಷಸನೊಂದಿಗೆ ಹೋರಾಡಿ ಆತನನ್ನು ಸಂಹಾರ ಮಾಡುತ್ತಾರೆ. ದ್ರೌಪದಿ ಸ್ವರ್ಗಾರೋಹಣ ಮಾಡಲು ಅಣಿಯಾಗುತ್ತಾಳೆ. ಆಗ, ಗಣಾಚಾರಿ, ವೀರಕುಮಾರರು, ನಮ್ಮನ್ನು ಅನಾಥರನ್ನಾಗಿ ಮಾಡಿ ಹೋಗದಂತೆ ತಾಯಿ ಬಳಿ ವಿಜ್ಞಾಪಿಸಿಕೊಳ್ಳುತ್ತಾರೆ.’
 
‘ಇದಕ್ಕೆ ಮಣಿದ ದ್ರೌಪದಿ ಚೈತ್ರ ಮಾಸದಲ್ಲಿ ಭೂಮಿಗೆ ಬಂದು ಮೂರು ದಿನಗಳವರೆಗೆ ನಿಮ್ಮ ಜತೆ ಇರುತ್ತೇನೆ ಎಂದು ಹೇಳುತ್ತಾಳೆ. ಅದರಂತೆ ಹಸಿಕರಗದ ದಿನ ಭೂಮಿಗೆ ಬರುವ ದೇವಿ ಮೂರು ದಿನ ನಮ್ಮ ಜತೆ ಇರುತ್ತಾಳೆ’ ಎಂದು ತಿಳಿಸಿದರು.
 
ಇಂದು ಪೊಂಗಲ್‌ ಸೇವೆ
‘ದ್ರೌಪದಿ ದೇವಿ ಮೂರು ದಿನಗಳವರೆಗೆ ಭೂಮಿಯಲ್ಲಿ ನೆಲೆಸುತ್ತಾಳೆ. ಆಕೆಗೆ ಇಷ್ಟವಾದ ಹುಗ್ಗಿಯನ್ನು (ಪೊಂಗಲ್‌) ಸಮರ್ಪಿಸಲಾಗುತ್ತದೆ. ತಿಂಗಳ ಜನಾಂಗಕ್ಕೆ ಸೇರಿದ ಹೆಣ್ಣು ಮಕ್ಕಳು ಸೋಮವಾರ ಮಧ್ಯರಾತ್ರಿ ಹುಗ್ಗಿಯನ್ನು ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸುತ್ತಾರೆ’ ಎಂದು ಗುಣಶೇಖರ್‌ ತಿಳಿಸಿದರು.

‘ಜತೆಗೆ ವೀರಕುಮಾರರು ಜನಾಂಗದ ಮನೆಗಳಿಗೆ ಹೋಗುತ್ತಾರೆ. ಅವರ ಬಳಿ ಇರುವ ತ್ರಿಶೂಲಕ್ಕೆ ಜನಾಂಗದವರು ಪೂಜೆ ಮಾಡುತ್ತಾರೆ. ಬಳಿಕ ವೀರಕುಮಾರರು ಅಲ್ಲಿಂದ ವಾಪಸ್‌ ಬರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.