ADVERTISEMENT

ಹುಚ್ಚ ವೆಂಕಟ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:23 IST
Last Updated 25 ನವೆಂಬರ್ 2015, 20:23 IST

ಬೆಂಗಳೂರು: ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬಂಧಿತರಾಗಿರುವ ಚಿತ್ರನಟ ಹುಚ್ಚ ವೆಂಕಟ್‌ ಅವರಿಗೆ ನಗರದ 17ನೇ ಸಿಸಿಎಚ್‌ ನ್ಯಾಯಾಲಯವು ಬುಧವಾರ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.

ಆದರೆ, ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಸದ ಕಾರಣ ವೆಂಕಟ್‌ ಅವರ ಬಿಡುಗಡೆಯಾಗಲಿಲ್ಲ. ವೆಂಕಟ್ ಪರ ವಾದ ಮಂಡಿಸಿದ ವಕೀಲ ಪಿ.ಶ್ರೀನಿವಾಸನ್, ‘ವೆಂಕಟ್ ಅವರು ಸ್ಕಿಜೋಫ್ರೆನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ಅಗತ್ಯ ಇದೆ. ಹೀಗಾಗಿ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದರು.

ಮನವಿ ಪುರಸ್ಕರಿಸಿದ ನ್ಯಾಯಾಧೀಶರು ₹ 25 ಸಾವಿರ ವೈಯಕ್ತಿಕ ಬಾಂಡ್‌, ಒಬ್ಬರ ಭದ್ರತೆ ನೀಡಬೇಕು, ಪೊಲೀಸರ ತನಿಖೆ ಸಹಕರಿಸಬೇಕು, ದೂರುದಾರರಿಗೆ ತೊಂದರೆ ಕೊಡಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸನ್‌, ‘ವೆಂಕಟ್‌ ಅವರ ಸಹೋದರಿ ಶ್ಯೂರಿಟಿ ನೀಡಲು ಬಂದಿದ್ದರು. ಆದರೆ, ಕಲಾಪದ ಅವಧಿ ಮುಗಿದಿದ್ದರಿಂದ ಗುರುವಾರ ಆ ಪ್ರಕ್ರಿಯೆ ನಡೆಸಲಾಗುವುದು’ ಎಂದರು.

ಚಿಕಿತ್ಸೆ ಕೊಡಿಸಿ: ಜಾಮೀನು ಅರ್ಜಿ ವಿಚಾರಣೆ ವೇಳೆ  ನ್ಯಾಯಾಲಯಕ್ಕೆ ಬಂದಿದ್ದ  ವೆಂಕಟ್‌ ಅವರ ಕುಟುಂಬ ಸದಸ್ಯರು, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಕುಟುಂಬ ಸದಸ್ಯರೇ ಚಿಕಿತ್ಸೆ ಕೊಡಿಸಬೇಕು. ಇದಕ್ಕೂ ನ್ಯಾಯಾಲಯಕ್ಕೂ ಸಂಬಂಧವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.