ADVERTISEMENT

ಹೂಡಿಕೆಗೆ ಬ್ರಿಟನ್‌ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 19:43 IST
Last Updated 27 ಆಗಸ್ಟ್ 2014, 19:43 IST

ಬೆಂಗಳೂರು:ವೈಮಾನಾಂತರಿಕ್ಷ, ಮಾಹಿತಿ ತಂತ್ರಜ್ಞಾನ, ಜೈವಿಕ ವಿಜ್ಞಾನ ಮತ್ತು ಹಾರ್ಡ್‌ವೇರ್‌ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಬ್ರಿಟಷ್‌ ಕಂಪೆನಿಗಳು ಆಸಕ್ತಿ ತೋರಿವೆ ಎಂದು ಬ್ರಿಟನ್‌ ಉಪ ಪ್ರಧಾನಿ ನಿಕ್‌ ಕ್ಲೆಗ್‌ ಬುಧವಾರ ಇಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವಿಧಾನಸೌಧದಲ್ಲಿ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ‘ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡಲು ಆಸಕ್ತಿ ಇದ್ದು, ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡ ನಂತರ ಬಂಡವಾಳ ಹರಿದುಬರಲಿದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉತ್ತಮ ಅವಕಾಶ ಇದ್ದು, ಅದನ್ನು ಸದುಪಯೋಗ­ಪಡಿಸಿಕೊ­ಳ್ಳು­ವಂತೆ ಬ್ರಿಟನ್‌ ಉಪ ಪ್ರಧಾನಿಗೆ ಮನವಿ ಮಾಡಿರುವುದಾಗಿ ಹೇಳಿದರು.

ಬೆಂಗಳೂರು– ಮುಂಬೈ ಆರ್ಥಿಕ ಕಾರಿಡಾರ್‌ ಮತ್ತಿತರ ಮೂಲಸೌಲಭ್ಯ ಯೋಜನೆಗಳಿಗೆ ಬ್ರಿಟನ್‌ ರಫ್ತು ಹಣ­ಕಾಸು ಸಂಸ್ಥೆ ಆರ್ಥಿಕ ನೆರವು ನೀಡುತ್ತಿರುವುದು ಉತ್ತೇಜನಕಾರಿ­ಯಾಗಿದೆ. ಅದೇ ರೀತಿ ಇತರ ಯೋಜನೆ­ಗಳಿಗೂ ಬಂಡವಾಳ ಹೂಡಲು ಗಮನ­ಹರಿಸಬೇಕು.

ಮಾನವ ಸಂಪನ್ಮೂಲಕ್ಕೆ ರಾಜ್ಯದಲ್ಲಿ ಕೊರತೆ ಇಲ್ಲ ಎಂಬುದನ್ನು ತಿಳಿಸಿದ್ದಾಗಿ ಮುಖ್ಯಮಂತ್ರಿ ವಿವರಿಸಿದರು. ಮೈಸೂರು ದಸರಾಕ್ಕೆ ಬರುವಂತೆ ಉಪ ಪ್ರಧಾನಿಗೆ ಆಹ್ವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.