ADVERTISEMENT

ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ಚಿದಂಬರಂ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಬೆಂಗಳೂರು: ನಗರದ ತರಗುಪೇಟೆಯ ಮೆಸರ್ಸ್‌ ಓಂ ಟ್ರೇಡರ್ಸ್‌  ಕಂಪೆನಿಯು ವಿದೇಶಗಳಿಂದ ವಿವಿಧ ನಮೂನೆಯ ಗಸಗಸೆ ಬೀಜಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಕೇಂದ್ರೀಯ ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಹಾಗೂ ವಿದೇಶ ವ್ಯಾಪಾರ ಇಲಾಖೆ ವಿಧಿಸಿದ್ದ ನಿರ್ಬಂಧಕ್ಕೆ ಹೈಕೋರ್ಟ್ ತಡೆ ನೀಡಿದೆ.

ಈ ಸಂಬಂಧ ಮೆಸರ್ಸ್‌ ಓಂ ಟ್ರೇಡರ್ಸ್‌ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.

ಚಿದಂಬರಂ ವಾದ: ಅರ್ಜಿದಾರರ ಪರ  ಹಾಜರಾಗಿದ್ದ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಅವರು, ‘ಕಂಪೆನಿ ಈಗಾಗಲೇ ಅಗತ್ಯ ಪರವಾನಗಿ ಹೊಂದಿದೆ. ಆದರೂ ಈ ಬೀಜಗಳ ಆಮದಿಗೆ ನಿಷೇಧ ಹೇರಿ ಅಧಿಸೂಚನೆ ಹೊರಡಿಸಲಾಗಿದೆ ಮತ್ತು ಇಂತಹುದೇ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಬಾಂಬೆ ಮತ್ತು ಮದ್ರಾಸ್‌ ಹೈಕೋರ್ಟ್‌ಗಳು  ಕೇಂದ್ರದ ಆದೇಶಕ್ಕೆ ತಡೆ ನೀಡಿವೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದನ್ನು ಮಾನ್ಯ ಮಾಡಿದ ಪೀಠವು,  ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.