ADVERTISEMENT

ಹೊಸೂರು ರಸ್ತೆ ವಿಸ್ತರಣೆ: ಬಿಬಿಎಂಪಿ ವಶಕ್ಕೆ ಮಸೀದಿ ಜಾಗ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:53 IST
Last Updated 22 ಅಕ್ಟೋಬರ್ 2017, 19:53 IST
ಶಿಯಾ ಮಸೀದಿಯ ಆವರಣ ಗೋಡೆಯನ್ನು ಭಾನುವಾರ ಕೆಡವಲಾಯಿತು –ಪ್ರಜಾವಾಣಿ ಚಿತ್ರ
ಶಿಯಾ ಮಸೀದಿಯ ಆವರಣ ಗೋಡೆಯನ್ನು ಭಾನುವಾರ ಕೆಡವಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಒಂದಾದ ಹೊಸೂರು ರಸ್ತೆಯ ವಿಸ್ತರಣೆಗಿದ್ದ ಒಂದು ತೊಡಕು ನಿವಾರಣೆಯಾಗಿದೆ. ಜಾನ್ಸನ್‌ ಮಾರುಕಟ್ಟೆ ಬಳಿ ಇರುವ ಶಿಯಾ ಮಸೀದಿಯ 9,000 ಚದರ ಅಡಿ ಜಾಗವನ್ನು ಬಿಬಿಎಂಪಿ ಭಾನುವಾರ ಸ್ವಾಧೀನಪಡಿಸಿಕೊಂಡಿದೆ.

‘ಸ್ಮಶಾನದ 8,000 ಚದರ ಅಡಿ ಹಾಗೂ ಮಸೀದಿಯ ಆವರಣದ 1,000 ಚದರ ಅಡಿ ಜಾಗವನ್ನು ವಶಪಡಿಸಿಕೊಂಡಿದ್ದೇವೆ. ಇದಕ್ಕೆ ಪರ್ಯಾಯ ಜಾಗ ನೀಡುವಂತೆ ಮಸೀದಿಯವರು ಕೇಳಿದ್ದಾರೆ. ಆದರೆ, ಅಭಿವೃದ್ದಿ ಹಕ್ಕುಗಳ ಹಸ್ತಾಂತರ ಪತ್ರ (ಟಿಡಿಆರ್‌) ನೀಡಲು ನಿರ್ಧರಿಸಿದ್ದೇವೆ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

‘ಜೆಸಿಬಿ ಸಹಾಯದಿಂದ ಮಸೀದಿಯ ಆವರಣ ಗೋಡೆ ತೆರವುಗೊಳಿಸಿದ್ದೇವೆ. ಇದಕ್ಕೆ ಪರ್ಯಾಯವಾಗಿ ಮಸೀದಿಯವರು ಈಗಾಗಲೇ ಆವರಣ ಗೋಡೆ ನಿರ್ಮಿಸಿಕೊಂಡಿದ್ದಾರೆ’ ಎಂದರು.

ADVERTISEMENT

‘ಬಾಲ್ಡ್‌ವಿನ್‌ ಬಾಲಕರ ಪ್ರೌಢಶಾಲೆಯ ಸ್ವಲ್ಪ ಜಾಗವನ್ನೂ ಸ್ವಾಧೀನಕ್ಕೆ ಪಡೆಯಬೇಕಿದೆ. ಆದರೆ, ಇದು ಪಾರಂಪರಿಕ ಕಟ್ಟಡವಾಗಿದೆ. ಇದನ್ನು ಕೆಡವಲು ಪುರಾತತ್ವ ಇಲಾಖೆಯಿಂದ ವಿಶೇಷ ಅನುಮತಿ ಪಡೆಯಬೇಕು. ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಹೊಸೂರು ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಕಿ.ಮೀ.ಗಟ್ಟಲೆ ವಾಹನಗಳು ನಿಲ್ಲುತ್ತವೆ. ರಸ್ತೆ ವಿಸ್ತರಣೆಯೊಂದೇ ಇದಕ್ಕೆ ಪರಿಹಾರ. ಇದಕ್ಕಾಗಿ ಮಸೀದಿಯ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸಿತ್ತು’ ಎಂದು ತಿಳಿಸಿದರು.

‘ರಕ್ಷಣಾ ಸಚಿವರಿಗೆ ಪತ್ರ’:

‘ಈ ವಿಸ್ತರಣೆಗೆ ರಕ್ಷಣಾ ಇಲಾಖೆಯ ಜಾಗವೂ ಬೇಕಿದೆ. ಇದು ಕ್ಯಾಂಪ್‌ಬೆಲ್‌ ರಸ್ತೆಯಿಂದ ಹಿಡಿದು ಆನೆಪಾಳ್ಯ ಮುಖ್ಯರಸ್ತೆಯವರೆಗೂ ಇದೆ. ಮುಖ್ಯರಸ್ತೆಯಿಂದ 8 ಮೀಟರ್‌ ಜಾಗ ಬಿಡುವಂತೆ ಮನವಿ ಮಾಡಿದ್ದೇವೆ. ಈ ಕುರಿತು ಮಾತುಕತೆ ನಡೆಸಲು ಸಮಯಾವಕಾಶ ನೀಡುವಂತೆ ಕೋರಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಎರಡೂ ಕಡೆ ಜಾಗ ಸಿಕ್ಕ ಕೂಡಲೇ ರಸ್ತೆ ವಿಸ್ತರಣೆ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.