ADVERTISEMENT

ಹೊಸ ಕಾಯ್ದೆ ಪ್ರಶ್ನಿಸಿ ರಿಟ್‌

ಹೊರ ರಾಜ್ಯದ ವಾಹನಗಳಿಗೆ ರಸ್ತೆ ತೆರಿಗೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:56 IST
Last Updated 1 ಫೆಬ್ರುವರಿ 2015, 19:56 IST

ಬೆಂಗಳೂರು: ‘ರಾಜ್ಯದ ಯಾವುದೇ ಭಾಗದಲ್ಲಿ ಹೊರ ರಾಜ್ಯದ ವಾಹನಗಳು 30 ದಿನಗಳಿಗೂ ಹೆಚ್ಚು ಕಾಲದಿಂದ ಸಂಚ­ರಿಸುತ್ತಿದ್ದರೆ ಅವಕ್ಕೆ ರಸ್ತೆ ತೆರಿಗೆ ಪಾವತಿಸಬೇಕು’ ಎಂಬ ರಾಜ್ಯದ ಹೊಸ ಕಾನೂನನ್ನು ಈಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಈಗಾಗಲೇ ಶುಕ್ರವಾರ ಈ ಕುರಿತಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೂ ಆದೇಶಿಸಿದ್ದ ನ್ಯಾಯಮೂರ್ತಿ ಹುಲು­ವಾಡಿ ಜಿ.ರಮೇಶ್‌ ಅವರಿದ್ದ ಏಕಸದಸ್ಯ ಪೀಠವು ಸೋಮವಾರ (ಫೆ.2) ಪ್ರಕರಣದ ವಿಚಾರಣೆ ನಡೆಸಲಿದೆ.

ಕೇರಳ ರಾಜ್ಯದ ತ್ರಿಶೂರ್‌ನ ಅನಂತು ಕರಟ್ಟುಪರಂಬಿಲ್‌ ಎಂಬುವವರು ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಹೈಕೋರ್ಟ್‌­­ನಲ್ಲಿ ರಿಟ್‌ ಅರ್ಜಿ  ಮೂಲಕ ಪ್ರಶ್ನಿಸಿದ್ದಾರೆ. 

ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ಕಾಯ್ದೆ–2014ರ ಅನುಸಾರ ಹೊರ ರಾಜ್ಯದ ವಾಹನಗಳ ಮಾಲೀಕರು ಕರ್ನಾಟಕದಲ್ಲಿ ಸತತವಾಗಿ ಒಂದು ತಿಂಗಳಿನಿಂದ ಆ ವಾಹನಗಳನ್ನು ಉಪಯೋಗಿಸಿದ್ದಲ್ಲಿ ರಸ್ತೆ ತೆರಿಗೆ ಪಾವತಿಸಬೇಕಿದೆ. ‘ನಾನು ಪುಣೆಯಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್‌ ಉದ್ಯೋ­ಗಿ­ಯಾಗಿದ್ದು ನನ್ನ ಪತ್ನಿ ಬೆಂಗ­ಳೂರಿ­ನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿ­ಯಾಗಿದ್ದಾರೆ. 2014ರ ಜುಲೈ ತಿಂಗ­ಳಿನಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. ಈ ಸಂದರ್ಭ­ದಲ್ಲಿ ಎಲೆ­ಕ್ಟ್ರಾನಿಕ್‌ ಸಿಟಿಯಲ್ಲಿ ಪೊಲೀ­ಸರು ನನ್ನ ವಾಹನ­ವನ್ನು ತಡೆದು ವಾಹನ­ಗಳ ದಾಖಲೆ ಕೇಳಿದರು ಮತ್ತು ಈ ಸಮ­ಯ­ದಲ್ಲಿ ನನ್ನ ಪತ್ನಿಯ ಬಳಿ­ಯಿದ್ದ ಗುರು­ತಿನ ಚೀಟಿ ನೋಡಿ ನೀವು ಕಾನೂ­ನಿನ ಅನುಸಾರ ಈ ವಾಹನಕ್ಕೆ ರಸ್ತೆ ತೆರಿಗೆ ಪಾವ­ತಿ­ಸಬೇಕು’ ಎಂದು ಎಚ್ಚರಿಕೆ ನೀಡಿದರು.

‘ಇವತ್ತಿನ ದಿನಮಾನಗಳಲ್ಲಿ ಜನರ ಉದ್ಯೋಗ ಶೈಲಿ ಬದಲಾಗಿದೆ. ತಮಗೆ ಅವಶ್ಯಕತೆ ಇದ್ದ ಸ್ಥಳಗಳಲ್ಲಿ ಕಾರ್ಯ ನಿಮಿತ್ತ ತೆರಳುವುದು, ಅಲ್ಪಕಾಲದವರೆಗೆ ಇದ್ದು ಪುನಃ ಸ್ವಸ್ಥಾನಗಳಿಗೆ ಮರಳು­ವುದು ಇಂದು ಸಾಮಾನ್ಯ­ವಾಗಿದೆ. ಅಂತ­ಹು­­ದರಲ್ಲಿ ಕರ್ನಾಟಕ ಸರ್ಕಾರದ ಹೊಸ ಕಾನೂನು ವ್ಯಕ್ತಿ­ಯೊಬ್ಬನ ಸಾಂವಿಧಾನಿಕ ಹಕ್ಕನ್ನು ಮೊಟಕು ಮಾಡಿ­ದಂತಾ­ಗು­ತ್ತದೆ’ ಎಂಬುದು ಅನಂತು ಅವರ ವಾದ.

‘ಈಗಾಗಲೇ ಹೊಸ ಕಾಯ್ದೆಯ ಅಡಿ­ಯಲ್ಲಿ ರಾಜ್ಯ ಸರ್ಕಾರ ಹೊರ ರಾಜ್ಯದ ಅನೇಕ ವಾಹನಗಳನ್ನು ವಶಕ್ಕೆ ಪಡೆದಿದ್ದು ಅವುಗಳನ್ನೆಲ್ಲಾ ಮೆಜೆಸ್ಟಿಕ್‌ ಬಳಿಯ ಬಿಎಂಟಿಸಿ ಸಮೀಪದ ಸ್ಥಳದಲ್ಲಿ ಇರಿಸಿದೆ. ಆದರೆ ಇವುಗಳಿಗೆ ಯಾವುದೇ ಭದ್ರತೆ ಒದಗಿಸಿಲ್ಲ’ ಎಂಬುದೂ ಅರ್ಜಿ­ದಾರರ ಅಳಲಿನ ಮತ್ತೊಂದು ಅಂಶ. ರಸ್ತೆ ತೆರಿಗೆ ಪಾವತಿ ಮಾಡಿ­ರು­ತ್ತಾರೆ. ಹಾಗಿ­ರುವಾಗ ಪುನಃ ಇಂತಹ ತೆರಿಗೆ ಪಾವ­ತಿಸಬೇಕು ಎಂಬುದು ಕಾನೂನು ಬಾಹಿರ ಎಂಬುದು ಅರ್ಜಿದಾರರ ಆರೋಪ.

ವಾಹನ ಮಾಲೀಕರ ಆನ್‌ಲೈನ್ ಅಭಿಯಾನ
‘ಎಷ್ಟೋ ಬಾರಿ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಾರೆ. ನೀವು 30ಕ್ಕೂ ಹೆಚ್ಚು ದಿನಗಳಿಂದ ಇಲ್ಲಿ ವಾಹನ ಓಡಿಸುತ್ತಿದ್ದೀರಿ ಎನ್ನುತ್ತಾರೆ. ಕೆಲವು ಪೊಲೀಸರಂತೂ ಈ ವಾಹನ ಇಂತಿಷ್ಟು ದಿನಗಳಿಂದ ಇಲ್ಲಿ ಸಂಚ­ರಿಸುತ್ತದೆ ಎಂದು ಅವರ ಮನಸ್ಸಿಗೆ ಬಂದಂತೆ ದೂರು ದಾಖ­ಲಿಸಿ­ಕೊಳ್ಳುತ್ತಾರೆ. ನಾವು ಈ ಸಂಬಂಧ ಈಗ ಆನ್‌ಲೈನ್‌ ಅಭಿಯಾನವನ್ನೇ ಶುರು ಮಾಡಿದ್ದೇವೆ. ಈ ಅಭಿ­ಯಾನ­ದಲ್ಲಿ 15 ಸಾವಿರ ಜನರು ಇದ್ದಾರೆ’ ಎಂಬುದು ಅಭಿ­ಯಾನದ ಮುಖ್ಯಸ್ಥ ವಾಸಿಮ್‌ ಮೆಮನ್‌ ಅಭಿಮತ.

‘2014ರ ಅಕ್ಟೋಬರ್ ತಿಂಗಳಿನಲ್ಲಿ ನಾವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೆವು. ಸುಪ್ರೀಂ ಕೋರ್ಟ್‌ ನಮಗೆ ಸ್ವಾತಂತ್ರ್ಯ ನೀಡಿ ಹೈಕೋರ್ಟ್‌ನಲ್ಲೇ ಇದನ್ನು ಪ್ರಶ್ನಿಸಲು ನಿರ್ದೇಶಿಸಿದೆ’ ಎಂದು ವಾಸಿಮ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT