ADVERTISEMENT

ಹೊಸ ತಲೆಮಾರು ಚಿತ್ತಾಲರನ್ನು ಓದಬೇಕು

ಕತೆಗಾರ ಜಯಂತ ಕಾಯ್ಕಿಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST
ಆಕಾಶವಾಣಿ ಕೇಂದ್ರ ನಗರದ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಚಿತ್ತಾಲ – ಚಿಂತನೆ’ ವಿಚಾರ ಸಂಕಿರಣದಲ್ಲಿ ಕತೆಗಾರರಾದ ಜಯಂತ ಕಾಯ್ಕಿಣಿ  (ಬಲಗಡೆಯಿಂದ ಮೊದಲನೆಯವರು) ಮತ್ತು ಎಸ್‌.ದಿವಾಕರ್‌ ಸಮಾ­ಲೋಚನೆ ನಡೆಸಿದರು. (ಎಡಗಡೆಯಿಂದ) ವಿಮರ್ಶಕಿ ಡಾ.ಬಿ.ಎನ್‌.­ಸುಮಿತ್ರಾಬಾಯಿ, ಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ಮತ್ತು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಚಿತ್ರದಲ್ಲಿದ್ದಾರೆ
ಆಕಾಶವಾಣಿ ಕೇಂದ್ರ ನಗರದ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಚಿತ್ತಾಲ – ಚಿಂತನೆ’ ವಿಚಾರ ಸಂಕಿರಣದಲ್ಲಿ ಕತೆಗಾರರಾದ ಜಯಂತ ಕಾಯ್ಕಿಣಿ (ಬಲಗಡೆಯಿಂದ ಮೊದಲನೆಯವರು) ಮತ್ತು ಎಸ್‌.ದಿವಾಕರ್‌ ಸಮಾ­ಲೋಚನೆ ನಡೆಸಿದರು. (ಎಡಗಡೆಯಿಂದ) ವಿಮರ್ಶಕಿ ಡಾ.ಬಿ.ಎನ್‌.­ಸುಮಿತ್ರಾಬಾಯಿ, ಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ಮತ್ತು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಚಿತ್ರದಲ್ಲಿದ್ದಾರೆ   

ಬೆಂಗಳೂರು: ‘ನಾವು ಮನುಷ್ಯರಾ­ಗಲು ಹುಟ್ಟಿದ್ದೇವೆ. ನಾನು ತಿಳಿದದ್ದನ್ನು ಬರೆ­ಯು­ವುದಿಲ್ಲ, ತಿಳಿಯುವುದಕ್ಕೇ ಬರೆಯು­ತ್ತೇನೆ ಎಂದು ಹೇಳಿದಂತೆ ಬದುಕಿದ ಕತೆಗಾರ ಯಶವಂತ ಚಿತ್ತಾಲರ ಬರಹ­ಗಳನ್ನು ಹೊಸ ತಲೆಮಾರಿಗೆ ಓದಲು ಹಚ್ಚಬೇಕು’ ಎಂದು ಕತೆಗಾರ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಆಕಾಶವಾಣಿ ಕೇಂದ್ರ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಭಾರತೀಯ ವಿದ್ಯಾಭವನ­ದಲ್ಲಿ ಆಯೋಜಿಸಿದ್ದ ‘ಚಿತ್ತಾಲ – ಚಿಂತನೆ’ ಎಂಬ ಯಶವಂತ ಚಿತ್ತಾಲರ ಬದುಕು– ಸಾಹಿತ್ಯ ಕುರಿತ ವಿಚಾರ ಸಂಕಿರಣ­ದಲ್ಲಿ ಚಿತ್ತಾಲರೊಂದಿಗಿನ ಒಡನಾಟ ಕುರಿತು ಅವರು ಮಾತನಾಡಿದರು.

‘ತುಂಬ ಶಿಸ್ತು, ವಾತ್ಸಲ್ಯ, ಮಮತೆ ಹೊಂದಿದ್ದ ಚಿತ್ತಾಲರು ಸಾಗರ ಪ್ರತಿಭೆಯ ಲೇಖಕರರಾಗಿದ್ದರು. ತಮ್ಮ ಬರವಣಿಗೆಯಿಂದಲೇ ರಕ್ತದೊತ್ತಡ­ವನ್ನು ಗ್ರಹಿಸುವಂತಹ ಸೂಕ್ಷ್ಮ ಸಂವೇದನೆ ಅವರದಾಗಿತ್ತು.  ಬರವಣಿಗೆ­ಯಲ್ಲಿ ಗಂಭೀರತೆ ತುಂಬಿರುತ್ತಿದ್ದರೂ, ಅದನ್ನು ಮೀರಿದ ಹಾಸ್ಯಪ್ರಜ್ಞೆ ಅವ­ರ­ಲ್ಲಿತ್ತು. ಶ್ರೇಷ್ಠತೆಯ ವ್ಯಸನ ಅವರ ಬಳಿಗೆ ಎಂದಿಗೂ ಸುಳಿಯಲಿಲ್ಲ’ ಎಂದರು.

ಚಿತ್ತಾಲರ ಸಣ್ಣಕಥಾಲೋಕ ಕುರಿತು ಮಾತನಾಡಿದ ಕತೆಗಾರ ಎಸ್‌.ದಿವಾಕರ್, ‘ಕನ್ನಡದ ಶಿಷ್ಟ ಕತೆಗಾರರಲ್ಲಿ ಒಬ್ಬರಾಗಿದ್ದ ಚಿತ್ತಾಲರು  ಮಾಸ್ತಿ ಅವರ ಕಥನ ಪರಂಪರೆಗೆಗೆ ತೀರ ನಿಕಟವಾಗಿದ್ದರು. ಅವರಷ್ಟು ತೀವ್ರವಾಗಿ ನಮ್ಮ ಸಾಮಾಜಿಕ ಮತ್ತು ಸಾಹಿತ್ಯಿಕ
ಚಳವಳಿಗಳಿಗೆ ಪ್ರತಿಕ್ರಿಯಿಸಿದವರು ಯಾರೂ ಇಲ್ಲ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಮನುಷ್ಯ ಸ್ವಭಾವ ವೈಚಿತ್ರ್ಯಗಳಲ್ಲಿ ಆಸಕ್ತಿ, ನೈತಿಕ ಮೌಲ್ಯಗಳ ಶೋಧನೆ, ಇವೆಲ್ಲವನ್ನೂ ಹೊಂದಿರುವ ಸಮು­ದಾಯ­ಗಳ ಗಾಢವಾದ ಅರಿವು, ಆತ್ಮ­ಶೋಧ, ಮನೋವಿಶ್ಲೇಷಣೆ, ಬದುಕು ಸಾವುಗಳ ನಿಗೂಢ ಸಂಬಂಧ, ಪ್ರತಿಮೆ­ಗಳ ಸೃಷ್ಟಿ ಕಾರ್ಯ ಅವರ ಒಟ್ಟಾರೆ  ಬರಹಗಳಲ್ಲಿ ಕಂಡುಬರುತ್ತವೆ’ ಎಂದರು.

ಚಿತ್ತಾಲರ ಕಾದಂಬರಿ ಪ್ರಪಂಚದ ಕುರಿತು ವಿಮರ್ಶಕಿ ಡಾ.ಬಿ.ಎನ್‌.ಸುಮಿತ್ರಾಬಾಯಿ ಅವರು ಮಾತನಾಡಿ, ‘ಎಲ್ಲ ಹಣದ ಮೂಲಕ ನಿಯಂತ್ರ­ವಾಗುವ ವ್ಯವಸ್ಥೆಯಲ್ಲಿ ಮನುಷ್ಯ­ರೊಳಗಿನ ಸಂಬಂಧಗಳು, ಭೂ ಮಾಫಿಯಾ, ಜೋಪಡಪಟ್ಟಿ, ಕೊಳಚೆ ಕೊಂಪೆಗಳ ಕರಾಳ ಜಗತ್ತಿನ ರಾಜಕೀಯ ಮತ್ತು ಮಾಧ್ಯಮಗಳ ದುರಂತ ಚಿತ್ರಣ ಚಿತ್ತಾಲರ ಕತೆಯ ಹೂರಣಗಳಾಗಿವೆ’ ಎಂದು ಹೇಳಿದರು.

ಚಿತ್ತಾಲರು ಸಮಗ್ರ ದರ್ಶನ ಕುರಿತು ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ‘ಇಂದು ಎಲ್ಲರನ್ನೂ ಕಂಗೆಡಿಸಿರುವ ತಲ್ಲಣ­ಗಳನ್ನು ಬಹು ಹಿಂದೆಯೇ ಚಿತ್ತಾಲರ ಕಾದಂಬರಿಯಲ್ಲಿ ಓದಿದಾಗ ಅತಿಶಯೋಕ್ತಿಯಲ್ಲಿ ರಂಜಿತವಾದ ಪ್ರತಿಮೆ ಎಂದು ಭಾವಿಸಿಕೊಂಡಿದ್ದವರೆ ಹೆಚ್ಚು. ಕಳೆದ ಒಂದು ದಶಕವರೆಗೆ ಜಾಗತಿಕರಣವನ್ನು ಅರ್ಥಮಾಡಿ­ಕೊ­ಳ್ಳುತ್ತ ಬಂದಿರುವ ನಮಗೆ ಚಿತ್ತಾಲರ ಸಾಹಿತ್ಯ ಜತೆಗೆ ಮರು ಸಂವಾದ ಮಾಡುವ ತುರ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಬಿ.ವಿ.­ರಾಜಾರಾಂ ಮತ್ತು ತಂಡದವರು ಚಿತ್ತಾಲರ ಸಣ್ಣಕಥೆಗಳ ಬಾನುಲಿ ರೂಪಗಳನ್ನು ಪ್ರದರ್ಶಿಸಿದರು.
ಆಕಾಶವಾಣಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಸಾದರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.