ADVERTISEMENT

ಹೋಟೆಲ್‌ ಮುಚ್ಚಿ ಪ್ರತಿಭಟನೆಗೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:56 IST
Last Updated 23 ನವೆಂಬರ್ 2017, 19:56 IST

ಬೆಂಗಳೂರು: ದಿಣ್ಣೂರಿನ ‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ಮಾಡಿದ್ದ ಎಸಿಪಿ ಮಂಜುನಾಥ್‌ ಬಾಬು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್ ಕುಮಾರ್‌ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ‘ಬೆಂಗಳೂರು ಹೋಟೆಲ್ ಮಾಲೀಕರ ಸಂಘ’ ತೀರ್ಮಾನಿಸಿದೆ.

ನ.9ರ ರಾತ್ರಿ ‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ಗೆ ಕಾನ್‌ಸ್ಟೆಬಲ್‌ ಜತೆಗೆ ಹೋಗಿದ್ದ ಎಸಿಪಿ, ಹೋಟೆಲ್‌ ಮಾಲೀಕ ರಾಜೀವ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದರು. ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ, ಇಲಾಖಾ ವಿಚಾರಣೆ ನಡೆಸುವಂತೆ ಕಮಿಷನರ್‌ ಅವರು ಉತ್ತರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಅವರಿಗೆ ಸೂಚಿಸಿದ್ದರು.

ಅದರನ್ವಯ ವಿಚಾರಣೆ ನಡೆಸಿದ ಡಿಸಿಪಿಯು, ಎಸಿಪಿ ಹಾಗೂ ಕಾನ್‌ಸ್ಟೆಬಲ್‌ ಉದ್ದೇಶಪೂರ್ವಕವಾಗಿ ಹೋಟೆಲ್‌ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ, ಅವರ ವರ್ತನೆ ತಪ್ಪು ಎಂದು ಮೂರು ಪುಟಗಳ ವರದಿಯನ್ನು ಕಮಿಷನರ್‌ ಅವರಿಗೆ ನ. 21ರಂದು ನೀಡಿದ್ದಾರೆ. ವರದಿ ನೀಡಿ ಎರಡು ದಿನವಾದರೂ ಎಸಿಪಿ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಡಿಸಿಪಿ ವಿಚಾರಣೆಯಲ್ಲಿ ಎಸಿಪಿ ತಪ್ಪು ಮಾಡಿದ್ದು ಸಾಬೀತಾಗಿದೆ. ಅಷ್ಟಾದರೂ ಕಮಿಷನರ್‌ ಕ್ರಮ ಜರುಗಿಸುತ್ತಿಲ್ಲ. ಅವರನ್ನು ಭೇಟಿಯಾಗಿ ಎರಡು ದಿನದೊಳಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಮಿಷನರ್‌ ಕ್ರಮ ಕೈಗೊಳ್ಳದಿದ್ದರೆ ನ. 27ರಂದು ಹೋಟೆಲ್‌ಗಳ ಬಂದ್‌ ಮಾಡಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ’ ಎಂದರು.

‘ಎಸಿಪಿ ಪರ ಕೆಲ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎಂಬ ಕಾರಣಕ್ಕೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಮೌನವಾಗಿರುವುದು ಖಂಡನೀಯ. ನಗರದಲ್ಲಿ ಸಾವಿರಾರು ಮಂದಿ ಹೋಟೆಲ್‌ ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂಥವರಿಗೆ ಯಾವುದೇ ತೊಂದರೆಯಾಗಬಾರದು. ಗೃಹ ಸಚಿವರನ್ನು ಭೇಟಿಯಾಗಿ ಸೂಕ್ತ ಭದ್ರತೆ ನೀಡುವಂತೆ ಕೋರಲಿದ್ದೇವೆ’ ಎಂದು ಹೆಬ್ಬಾರ್‌ ತಿಳಿಸಿದರು. 

ಸೈಬರ್‌ ತಜ್ಞರ ನೆರವು: ಎಸಿಪಿ ಅವರ ವಿರುದ್ಧ ದೂರು ನೀಡಿರುವ ಹೋಟೆಲ್‌ ಮಾಲೀಕ ರಾಜೀವ್‌ ಶೆಟ್ಟಿ ಅವರಿಗೆ ರವಿ ಪೂಜಾರಿ ಹೆಸರಿನಲ್ಲಿ ಬಂದಿದ್ದ ಕರೆಯ ಬಗ್ಗೆ ತನಿಖೆ ನಡೆಸುತ್ತಿರುವ ಆರ್‌.ಟಿ. ನಗರ ಠಾಣೆಯ ಪೊಲೀಸರು, ಸೈಬರ್‌ ತಜ್ಞರ ನೆರವು ಕೋರಿದ್ದಾರೆ.

‘ನಗರದಲ್ಲಿ ಇರುವ ಕಿಡಿಗೇಡಿಗಳೇ ಅಂತರ್ಜಾಲದ ಮೂಲಕ ಕರೆ ಮಾಡಿ ಬೆದರಿಸಿದ್ದಾರೆ. ಅವರನ್ನು ಹುಡುಕುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತುರ್ತು ಸಭೆ: ಡಿಸಿಪಿ ಸಲ್ಲಿಸಿರುವ ವರದಿಯ ಪರಿಶೀಲನೆ ನಡೆಸುತ್ತಿರುವ ಕಮಿಷನರ್‌ ಸುನೀಲ್‌ ಕುಮಾರ್‌, ಗುರುವಾರ ಮಧ್ಯಾಹ್ನ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಹೆಚ್ಚುವರಿ ಪೊಲೀಸ್‌ ಕಮಿಷನರ್‌ಗಳಾಗ ಮಾಲಿನಿ ಕೃಷ್ಣಮೂರ್ತಿ, ಸೀಮಂತ್ ಕುಮಾರ್ ಸಿಂಗ್ ಹಾಗೂ ಕೆಲ ಡಿಸಿಪಿಗಳು ಸಭೆಯಲ್ಲಿ ಹಾಜರಿದ್ದರು. ವರದಿ ಜಾರಿ ಹಾಗೂ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿರುವ ಅವಕಾಶಗಳ ಬಗ್ಗೆ ಚರ್ಚೆ ನಡೆದಿರುವುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.