ADVERTISEMENT

‘ಅಗ್ರಿ ಎಕೋ ಟೂರಿಸಂ’ ಯೋಜನೆ ಅಳವಡಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:24 IST
Last Updated 5 ಅಕ್ಟೋಬರ್ 2015, 20:24 IST

ಬೆಂಗಳೂರು: ‘ರೈತರು ತಮ್ಮ ಜಮೀನುಗಳಲ್ಲಿ ‘ಅಗ್ರಿ ಎಕೋ ಟೂರಿಸಂ’ ಎಂಬ ನೂತನ ಯೋಜನೆಯನ್ನು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬಹುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು. 

ಭಾನುವಾರ ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಹೆಬ್ಬಾಳ ಕೃಷಿ ಕಾಲೇಜಿನ 1975ರ ಬ್ಯಾಚ್‌ ವಿದ್ಯಾರ್ಥಿಗಳ 40ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಈಗಾಗಲೇ ಕೊಡಗು ಭಾಗದಲ್ಲಿ ‘ಅಗ್ರಿ ಟೂರಿಸಂ’ ಎಂಬ ಯೋಜನೆಯನ್ನು ‘ಹೋಂ ಸ್ಟೇ’ ಹೆಸರಿನಲ್ಲಿ ನಡೆಸಲಾಗುತ್ತಿದೆ’ ಎಂದರು.
‘ನಗರೀಕರಣದ ಪ್ರಭಾವದಿಂದ ಎಲ್ಲೆಡೆ ಕೃಷಿಭೂಮಿ ಕಡಿಮೆಯಾಗಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಕೃಷಿ ಚಟುವಟಿಕೆಗಳು ಕಡಿಮೆಯಾ ಗುತ್ತಿರುವ ಪರಿಣಾಮ ಜನರ ಮೇಲೆ ದುಷ್ಪರಿಣಾಮ ಉಂಟಾಗಲಿದೆ’ ಎಂದು  ಎಚ್ಚರಿಸಿದರು.

‘ಕೃಷಿ ವಿಜ್ಞಾನಿಗಳು  ಹಾಗೂ ಪರಿಣತರು ನೂತನ ಸಂಶೋಧನೆಗಳ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕು. ರೈತರು ತಮ್ಮ ಜಮೀನುಗಳನ್ನು ಮಾರಿಕೊಂಡು ಹಳ್ಳಿಗಳಿಂದ ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಬೇಕಾಗಿದೆ’ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ರಾಷ್ಟ್ರೀಯ ಕೀಟ ನಿರ್ವಹಣಾ ಮಂಡಳಿ ನಿರ್ದೇಶಕ ಡಾ. ಅಬ್ರಹಾಂ ವರ್ಗೀಸ್‌, ಗೋವಾ ರಾಜ್ಯದ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕಿ ಫ್ರೀಡಾ ಫರ್ನಾಂಡಿಸ್‌, ಪರಿಸರವಾದಿ ವಿಷ್ಣು ನಾರಾಯಣ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.