ADVERTISEMENT

‘ಆತ್ಮಹತ್ಯೆ ತಡೆಗೆ ವಿಮಾ ಸಂಸ್ಥೆ ಶ್ರಮಿಸಲಿ’

ಸಚಿವ ಎಚ್‌.ಕೆ.ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಮೇ 2016, 19:30 IST
Last Updated 23 ಮೇ 2016, 19:30 IST
ಎಚ್‌.ಕೆ.ಪಾಟೀಲ ಹಾಗೂ ಭಾರತೀಯ ವಿಮಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ವೇಣುಗೋಪಾಲ್ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಸಹಕಾರ ಬ್ಯಾಂಕ್‌ಗಳ ಫೋರಂನ ಸಂಚಾಲಕ ಸಿ.ವಿ.ಕುಮಾರ್ ಇದ್ದಾರೆ –ಪ್ರಜಾವಾಣಿ ಚಿತ್ರ
ಎಚ್‌.ಕೆ.ಪಾಟೀಲ ಹಾಗೂ ಭಾರತೀಯ ವಿಮಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ವೇಣುಗೋಪಾಲ್ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಸಹಕಾರ ಬ್ಯಾಂಕ್‌ಗಳ ಫೋರಂನ ಸಂಚಾಲಕ ಸಿ.ವಿ.ಕುಮಾರ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿಮಾ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ರೈತರ ಆತ್ಮಹತ್ಯೆ ತಡೆಯಬಹುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಕಂಟ್ರೋಲರ್‍ಸ್  ಸಹಕಾರ ಬ್ಯಾಂಕ್‌ ಹಾಗೂ ಬೆಂಗಳೂರು ವಿಮಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಸಹಕಾರ ಚಳವಳಿ ಮತ್ತು ವಿಮಾರಂಗದ ಮೂಲ ತತ್ವಗಳ ಒಂದು ಹಿನ್ನೋಟ– ಇಂದಿನ ಅಗತ್ಯ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ರೈತರು ನಷ್ಟ ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ವಿಮೆ ಕಂಪನಿಗಳು ರೈತರ ನೆರವಿಗೆ ಧಾವಿಸಬೇಕು. ವಿಮೆ ಸೌಲಭ್ಯ ರೈತರ ಪಾಲಿನ ಪಾಶುಪತಾಸ್ತ್ರವಿದ್ದಂತೆ’ ಎಂದರು.

‘ಭಾರತದಲ್ಲಿ ವಿಮೆ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಬಹಳಷ್ಟು ಜನರಿಗೆ ಅದರ ಮಹತ್ವವೂ ತಿಳಿದಿಲ್ಲ. ಹೀಗಾಗಿ ವಿಮೆ ನಮ್ಮ ದೇಶದಲ್ಲಿ ಜನಪ್ರಿಯವಾಗಿಲ್ಲ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ವಿಮೆಗೆ ಹೆಚ್ಚು ಒತ್ತು ನೀಡಲಾಗಿದೆ’ ಎಂದು ಹೇಳಿದರು.

‘ಸಹಕಾರಿ ಬ್ಯಾಂಕ್‌ಗಳು ಸಾಲ ವಸೂಲಿ, ಲೆಕ್ಕಪತ್ರಗಳ ನಿರ್ವಹಣೆಗೆ ಸೀಮಿತವಾಗದೆ, ಜನರ ಬದುಕಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು. ತಮ್ಮ ಸೇವೆಯನ್ನು ಮತ್ತಷ್ಟು ಜನರಿಗೆ ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.

‘ವೈದ್ಯಕೀಯ ವಿಮೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ.   ಪ್ರೀಮಿಯಂ ಮೊತ್ತ ದುಬಾರಿಯಾಗಿರುವ ಕಾರಣ ಜನರು ಈ ವಿಮೆಯಿಂದ ದೂರ ಸರಿಯುವಂತಾಗಿದೆ. ಆದರೆ, ಯಶಸ್ವಿನಿ ಯೋಜನೆ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ವೈದ್ಯಕೀಯ ವಿಮೆಯನ್ನು ಮತ್ತಷ್ಟು ವಿಸ್ತರಿಸಲು ಸಹಕಾರಿ ಕ್ಷೇತ್ರದಲ್ಲಿರುವವರು  ಶ್ರಮಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.