ADVERTISEMENT

‘ಇನ್‌ಸ್ಪೆಕ್ಟರ್ ತೊಂದರೆ ಕೊಡುತ್ತಿದ್ದರು’

ಎಸ್‌ಐ ರೂಪಾ ಅವರ ಹೇಳಿಕೆ ದಾಖಲಿಸಿಕೊಂಡ ಎಸಿಪಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2016, 19:55 IST
Last Updated 22 ಜುಲೈ 2016, 19:55 IST
‘ಇನ್‌ಸ್ಪೆಕ್ಟರ್ ತೊಂದರೆ ಕೊಡುತ್ತಿದ್ದರು’
‘ಇನ್‌ಸ್ಪೆಕ್ಟರ್ ತೊಂದರೆ ಕೊಡುತ್ತಿದ್ದರು’   

ಬೆಂಗಳೂರು: ‘ಇನ್‌ಸ್ಪೆಕ್ಟರ್ ಸಂಜೀವ್‌ಗೌಡ ಅವರು ಕರ್ತವ್ಯದ ವಿಚಾರವಾಗಿ ತೊಂದರೆ ಕೊಡುತ್ತಿದ್ದರು.  ಈಚೆಗೆ ಮೊಬೈಲ್ ನಾಪತ್ತೆ ವಿಚಾರವಾಗಿ ಆರೋಪಿಗಳು ಹಾಗೂ ಸಿಬ್ಬಂದಿಯ ಎದುರೇ ಮನಬಂದಂತೆ ಬೈಯ್ದರು. ಇದರಿಂದ ಬೇಸರವಾಗಿ ಆತ್ಮಹತ್ಯೆಗೆ ಯತ್ನಿಸಿದ್ದೆ’ ಎಂದು ಎಸ್‌ಐ ರೂಪಾ ತೆಂಬದಾ ಅವರು ಅಧಿಕಾರಿಗಳಿಗೆ ಹೇಳಿಕೆ ಕೊಟ್ಟಿದ್ದಾರೆ.

ಮಲ್ಲೇಶ್ವರ ಉಪವಿಭಾಗದ ಎಸಿಪಿ ಅರುಣ್ ನಾಯಕ್, ಗುರುವಾರ ರಾತ್ರಿ ಆಸ್ಪತ್ರೆಗೆ ತೆರಳಿ ರೂಪಾ ಅವರ ಹೇಳಿಕೆ ದಾಖಲಿಸಿಕೊಂಡರು. ‘ಅವಧಿ ಮೀರಿ ಕೆಲಸ ಮಾಡಿದರೂ ಬೆಲೆ ಸಿಗುತ್ತಿರಲಿಲ್ಲ. ನನ್ನ ತಪ್ಪಿಲ್ಲದಿದ್ದರೂ ನಿಂದನೆ ಎದುರಿಸಬೇಕಿತ್ತು. ಹೀಗಾಗಿ ಬೇರೆ ಠಾಣೆಗೆ ವರ್ಗಾವಣೆ ಕೋರಿ ಎರಡು ವಾರಗಳ ಹಿಂದೆ ಕಮಿಷನರ್‌ಗೆ ಅರ್ಜಿ ಕೊಟ್ಟಿದ್ದೆ’ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.

‘ಈ ಹಿಂದಿದ್ದ ಇನ್‌ಸ್ಪೆಕ್ಟರ್‌ಗಳು ಬಂದೋಬಸ್ತ್ ಹಾಗೂ ತನಿಖಾ ಕೆಲಸಗಳಿಗೂ ನನ್ನನ್ನು ಬಳಸಿಕೊಳ್ಳುತ್ತಿದ್ದರು. ಆಗಿನ ಕಾರ್ಯವೈಖರಿ ನನಗೆ ಇಷ್ಟವಾಗುತ್ತಿತ್ತು. ಆದರೆ, ಸಂಜೀವ್‌ಗೌಡ ಬಂದ ನಂತರ ಕಚೇರಿ ಕೆಲಸಗಳನ್ನು ಮಾತ್ರ ಮಾಡಬೇಕಾಯಿತು. ಅಮಾನತು ಶಿಕ್ಷೆ ಮುಗಿಸಿ ವಾಪಸಾದ ಬಳಿಕ ವಿನಾ ಕಾರಣ ಎಲ್ಲರ ಮೇಲೂ ಕೂಗಾಡುತ್ತಿದ್ದರು. ನನ್ನನ್ನು ಕಂಡರೆ ಅವರಿಗೆ ಆಗುತ್ತಿರಲಿಲ್ಲ.

‘ಜೂನ್ 16ರಂದು ದಾಖಲಾದ ಪೋಕ್ಸೊ ಪ್ರಕರಣವನ್ನು ನಾನೇ ತನಿಖೆ ಮಾಡಿದ್ದೆ. ಆರೋಪಿಯನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೂ ಕಳುಹಿಸಿದ್ದೆ. ಆತನಿಂದ ಜಪ್ತಿ ಮಾಡಿದ್ದ ಮೊಬೈಲ್ ಠಾಣೆಯಲ್ಲೇ ಇತ್ತು.

‘ಜುಲೈ 15ರಂದು ಠಾಣೆಗೆ ಮರಳಿದ ಸಂಜೀವ್‌ಗೌಡ, ಸರಿಯಾಗಿ ತನಿಖೆ ಮಾಡಿಲ್ಲವೆಂದು ನಿಂದಿಸಿದರು. ಈ ನಡುವೆ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ, ಠಾಣೆಗೆ ಬಂದು ಮೊಬೈಲ್ ನೀಡುವಂತೆ ಕೇಳಿದ್ದ. ಇನ್‌ಸ್ಪೆಕ್ಟರ್ ಅನುಮತಿ ಪಡೆದು ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದೆ. ಅಷ್ಟಕ್ಕೇ ನಾನು ಕರ್ತವ್ಯಲೋಪ ಎಸಗಿದೆ ಎಂದೆಲ್ಲ ಡೈರಿಯಲ್ಲಿ ಬರೆದಿಟ್ಟಿದ್ದರು. ಇದರಿಂದ ಬೇಸರವಾಯಿತು’ ಎಂದು ಅವರು ತಿಳಿಸಿದ್ದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೊಬೈಲ್ ಪತ್ತೆ
‘ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿದ್ದ ಮೊಬೈಲ್ ಠಾಣೆಯ ಟ್ರೇಯಲ್ಲೇ ಪತ್ತೆಯಾಗಿದೆ. ಇಷ್ಟು ದಿನ ನಾಪತ್ತೆಯಾಗಿತ್ತು ಎನ್ನಲಾಗಿದ್ದ ಆ ಮೊಬೈಲ್, ಗುರುವಾರ ಸಂಜೆ ಸಿಕ್ಕಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

***
ಪತ್ನಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶುಕ್ರವಾರ ಸಂಜೆ ಆಕೆಯನ್ನು ವಾರ್ಡ್‌ಗೆ ಸ್ಥಳಾಂತರ ಮಾಡಿದ್ದಾರೆ. ಎಲ್ಲರ ಜತೆ ಚೆನ್ನಾಗಿ ಮಾತನಾಡುತ್ತಿದ್ದಾಳೆ
-ನಟರಾಜ್, ರೂಪಾ ಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.