ADVERTISEMENT

‘ಕಥೆಗಳು ವಾಸ್ತವ ಬಿಂಬಿಸಬೇಕು’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2016, 19:31 IST
Last Updated 7 ಫೆಬ್ರುವರಿ 2016, 19:31 IST
ವಿವೇಕ ಶಾನಭಾಗ ಅವರು ‘ಮರೆವಿನ ಬಳ್ಳಿ’ ಕೃತಿಯನ್ನು ಬಿಡುಗಡೆ ಮಾಡಿದರು. ಎಂ.ಎಸ್‌. ಆಶಾದೇವಿ, ಎಸ್‌.ಆರ್‌. ವಿಜಯಶಂಕರ್‌, ಸಚ್ಚಿದಾನಂದ ಹೆಗಡೆ ಚಿತ್ರದಲ್ಲಿದ್ದಾರೆ  ––ಪ್ರಜಾವಾಣಿ ಚಿತ್ರ
ವಿವೇಕ ಶಾನಭಾಗ ಅವರು ‘ಮರೆವಿನ ಬಳ್ಳಿ’ ಕೃತಿಯನ್ನು ಬಿಡುಗಡೆ ಮಾಡಿದರು. ಎಂ.ಎಸ್‌. ಆಶಾದೇವಿ, ಎಸ್‌.ಆರ್‌. ವಿಜಯಶಂಕರ್‌, ಸಚ್ಚಿದಾನಂದ ಹೆಗಡೆ ಚಿತ್ರದಲ್ಲಿದ್ದಾರೆ ––ಪ್ರಜಾವಾಣಿ ಚಿತ್ರ   

ಬೆಂಗಳೂರು:  ‘ಕಥೆಗಾರ ಅತಿಯಾದ ವಿಜೃಂಭಣೆ ಇಲ್ಲದೆ, ವಾಸ್ತವಕ್ಕೆ ಹತ್ತಿರವಿರುವ ಕಥೆಗಳನ್ನು ಬರೆಯಬೇಕು’ ಎಂದು ಸಾಹಿತಿ ವಿವೇಕ ಶಾನಭಾಗ ಹೇಳಿದರು.

ಅಂಕಿತ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಹಿತಿ ಸಚ್ಚಿದಾನಂದ ಹೆಗಡೆ ಅವರ ‘ಮರೆವಿನ ಬಳ್ಳಿ’ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬ ಮನುಷ್ಯನಲ್ಲೂ ಕಥೆ ಬರೆಯುವ ಮನಸ್ಸು ಇರುತ್ತದೆ. ಆದರೆ ಅದನ್ನು ಅಕ್ಷರ ರೂಪಕ್ಕೆ ತರುವುದು ಮುಖ್ಯವಾಗುತ್ತದೆ. ಮೊದಲ ಕಥಾ ಸಂಕಲನಕ್ಕಿಂತ ಎರಡನೆಯ ಸಂಕಲನದಲ್ಲಿ ಕಥೆಗಾರನ ಬರವಣಿಗೆಯ ಶೈಲಿ ಹೇಗಿದೆ ಎಂಬುದನ್ನು ತಿಳಿಯಬಹುದು’ ಎಂದರು.

‘ಸಚ್ಚಿದಾನಂದ ಅವರು  ಸಾಹಿತ್ಯವನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡುತ್ತಾರೆ. ಅವರ ಕಥೆಗಳೂ ವಿಭಿನ್ನವಾಗಿ ಮೂಡಿಬಂದಿವೆ. ಓದುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಈ ಕಥೆಗಳಿಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಮರ್ಶಕಿ ಎಂ.ಎಸ್‌.ಆಶಾದೇವಿ ಮಾತನಾಡಿ, ‘ಕಲೆಯ ಜತೆಗೆ ಎಲ್ಲ  ಕಾಲದಲ್ಲೂ  ಸಂವಾದ ನಡೆಸಲು  ಕಲಾವಿದನಿಗೆ ಮಾತ್ರ ಸಾಧ್ಯವಿರುತ್ತದೆ. ಕಲಾವಿದ ತಾನು ಸೃಷ್ಟಿಸಿಕೊಳ್ಳುವ ರೂಪಕದಲ್ಲಿ ಕಥೆಯನ್ನು ಕಟ್ಟಿಕೊಡುತ್ತಾನೆ. ಸಚ್ಚಿದಾನಂದ ಅವರು ಕಲಾವಿದರಾಗಿರುವುದರಿಂದ ಅವರ ಕಥೆಗಳಲ್ಲಿ ಕಲೆಯ ಸ್ಪರ್ಶವನ್ನು ಗುರುತಿಸಬಹುದು’ ಎಂದರು.

‘ವರ್ತಮಾನದ ಆತಂಕಗಳನ್ನು ತಡೆದುಕೊಳ್ಳಲಾಗದೆ ಭೂತಕಾಲದ ಕಡೆಗೆ ಪಯಣಿಸುವ ಚಿತ್ರಣವನ್ನು ಇವರ ಕಥೆಗಳು ನೀಡುತ್ತವೆ. ಯಾವ ಸಮಯದಲ್ಲಿ ಬೇಕಾದರೂ ಬದುಕು ತನ್ನ ದಿಕ್ಕನ್ನು ಬದಲಿಸಬಹುದು. ಬದುಕಿನ ಸತ್ಯಗಳನ್ನು ಎದುರಿಸಲು ಬೇಕಾದ ಮನೋವಿನ್ಯಾಸವನ್ನು ಈ ಕಥೆಗಳು ನೀಡುತ್ತವೆ’ ಎಂದರು.

ವಿಮರ್ಶಕ ಎಸ್‌.ಆರ್. ವಿಜಯಶಂಕರ್‌ ಮಾತನಾಡಿ ‘ಮರೆವಿನ ಬಳ್ಳಿಯ ಕಥೆಗಳು, ಮರೆವು ದೌರ್ಬಲ್ಯದ ಸಂಕೇತ ಅಲ್ಲ; ಶಕ್ತಿಯ ಸಂಕೇತ ಎಂಬುದನ್ನು ಸಾರುತ್ತವೆ. ಮರೆವಿಗೆ ಸಾರ್ವಕಾಲಿಕ ಶಕ್ತಿ ಇದೆ ಎನ್ನುವುದನ್ನು ತಿಳಿಸುತ್ತವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.