ADVERTISEMENT

‘ಕಥೆಗಾರಿಕೆ ಬಾಂಬ್‌ಗಿಂತ ಅಪಾಯಕಾರಿ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2016, 19:48 IST
Last Updated 20 ಮಾರ್ಚ್ 2016, 19:48 IST
ಕವಿ ಸಿದ್ದಲಿಂಗಯ್ಯ ಅವರು ಬಿಡುಗಡೆ ಮಾಡಿದ ಪುಸ್ತಕಗಳ ಪತ್ರಿಗಳನ್ನು ಲೇಖಕ ಕೆ.ಎನ್.ಗಣೇಶಯ್ಯ ಅವರಿಗೆ ನೀಡಿದರು. ಕೆ.ಸತ್ಯನಾರಾಯಣ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ
ಕವಿ ಸಿದ್ದಲಿಂಗಯ್ಯ ಅವರು ಬಿಡುಗಡೆ ಮಾಡಿದ ಪುಸ್ತಕಗಳ ಪತ್ರಿಗಳನ್ನು ಲೇಖಕ ಕೆ.ಎನ್.ಗಣೇಶಯ್ಯ ಅವರಿಗೆ ನೀಡಿದರು. ಕೆ.ಸತ್ಯನಾರಾಯಣ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಥೆಗಾರಿಕೆ ಬಾಂಬ್‌ಗಿಂತ ಅಪಾಯಕಾರಿ. ಬಾಂಬ್‌ ಅನ್ನು ಕೇವಲ ಯುದ್ಧದಲ್ಲಿ ಸಮಯದಲ್ಲಿ ಬಳಸ ಬಹುದು. ಆದರೆ ಕಥೆಯ ಪ್ರಭಾವವನ್ನು ನಾವು ಪ್ರತಿನಿತ್ಯ ಉಪಯೋಗಿಸುತ್ತೇವೆ’ ಎಂದು ಕಥೆಗಾರ ಕೆ.ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಅಂಕಿತ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಲೇಖಕ ಕೆ.ಎನ್.ಗಣೇಶಯ್ಯ ಅವರ ‘ಪೆರಿನಿ ತಾಂಡವ’ (ಕಥೆಗಳು), ‘ಭಿನ್ನೋಟ’ (ಲೇಖನಗಳು) ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾವು ನಿತ್ಯ ಬದುಕಿರುವುದೇ ಒಂದು ಕಥೆ ಕಟ್ಟುವುದು, ತಿರುಚುವುದು, ಮುಚ್ಚಿ ಹಾಕುವುದು ಮತ್ತು ಒಂದು ಪಾತ್ರವನ್ನು ನಮಗೆ ಬೇಕಾದ ಹಾಗೆ ತಿರುಚಿ ಹಾಕುವುದರಲ್ಲಿ’ ಎಂದು ಹೇಳಿದರು.

‘‘ನಿರೂಪಣೆಯ ರಾಜಕೀಯ’ ಎರಡು ರೀತಿಯಲ್ಲಿ ನಡೆಯುತ್ತದೆ. ಸಾಹಿತ್ಯ ವಲಯದಲ್ಲಿ ಸಾಮಾನ್ಯವಾಗಿ ಒಂದು ಪಂಥದವರು ಮುಂದೆ ಬಂದಾಗ ಹಿಂದಿನವರ ಕಥೆ ಕಟ್ಟುವ ಕ್ರಮವನ್ನು ಪ್ರಶ್ನಿಸುವುದು. ನಾವು ಬರೆಯುವುದೇ ಶ್ರೇಷ್ಠ ಎಂದು ಹೇಳುವುದು ಒಂದು ಬಗೆ.  60–70ರ ದಶಕದಲ್ಲಿ ನವ್ಯ ಚಳವಳಿ ಕಾಲದಲ್ಲಿ ಮಾಸ್ತಿ, ಕುವೆಂಪು, ಕಾರಂತ ಅವರ ಕಥನ ಶೈಲಿಗಳನ್ನು ಒಪ್ಪಲಾಗದು ಎಂಬ ಪ್ರಚಾರ ಸುಮಾರು ಎರಡು ದಶಕಗಳ ಕಾಲ ನಡೆಯಿತು’ ಎಂದು ತಿಳಿಸಿದರು.

‘ಸಮಕಾಲೀನ ಕ್ಷೇತ್ರದಲ್ಲಿ ಒಂದು ಗುಂಪಿನ ಲೇಖಕರು ಒಂದಷ್ಟು ಕಥೆಗಾರರನ್ನು ಜತೆಗೆ ಒಂದು ರೀತಿಯ ಕಥನಕ್ರಮ, ಪಾತ್ರ ಚಿತ್ರಣವನ್ನು  ಮುಂದೆ ತರಲು ಇಷ್ಟಪಡುತ್ತಾರೆ. ಇದನ್ನು ತಪ್ಪು ಎಂದು ಹೇಳಲಾಗದು’ ಎಂದರು.

‘ಒಂದು ಕಥೆ ಕೇಳಿಸಿಕೊಂಡು ಅದನ್ನು ನಮಗೆ ಬೇಕಾದ ರೀತಿಯಲ್ಲಿ ಅರ್ಥೈಸುವುದು ಇನ್ನೊಂದು ಬಗೆ. ಎಲ್ಲ ಕಾಲದಲ್ಲಿಯೂ ಮನುಷ್ಯ ಸಂಬಂಧ, ಗಂಡು–ಹೆಣ್ಣಿನ ಪ್ರೇಮ, ಯುದ್ಧ, ಶಾಂತಿ ಇಂತಹದ್ದೇ ವಿಷಯಗಳ ಮೇಲೆ ಕಥೆಗಳು ಸಾಮಾನ್ಯವಾಗಿ ಇರುತ್ತವೆ. ಆದರೆ ನಿರೂಪಣೆ ಮತ್ತು ಕಥೆಯ ನಾಯಕರಲ್ಲಿ ಬದಲಾವಣೆ ಕಾಣುತ್ತದೆ. ಇದೆಲ್ಲ ನಮ್ಮ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಮಾಡುವ ಪ್ರಯತ್ನ’ ಎಂದು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕವಿ ಸಿದ್ದಲಿಂಗಯ್ಯ, ‘ಈಗಿರುವ ಪ್ರತಿಷ್ಠಿತ ಚಿಂತನೆಗಳಿಗೆ ಪ್ರತಿರೋಧ ಒಡ್ಡುವ ಚಿಂತನೆ ಹೊಂದಿರುವ ಗಣೇಶಯ್ಯನವರು ಒಬ್ಬ ವಿಶಿಷ್ಟ ಲೇಖಕ.  ಅವರಲ್ಲಿ ತೇಜಸ್ವಿ ಮತ್ತು ಭೈರಪ್ಪನವರ ಕೆಲ ಅಂಶಗಳಿವೆ. ಅವರ ಕೃತಿಗಳಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಶಮನಕಾರಿ ಶಕ್ತಿ ಇದೆ’ ಎಂದು ಬಣ್ಣಿಸಿದರು.

‘ವಿಜ್ಞಾನಿಗಳ ಬಗ್ಗೆ ಸಾಹಿತಿಗಳು ಹಬ್ಬಿಸುತ್ತಿರುವ ಅಪಪ್ರಚಾರ ಮತ್ತು ಜನಸಾಮಾನ್ಯರಲ್ಲಿರುವ ತಪ್ಪು ಕಲ್ಪನೆಗಳನ್ನು ವಿವರಿಸುವ ಪ್ರಯತ್ನವನ್ನು ಅವರು ತಮ್ಮ ಕೃತಿಗಳಲ್ಲಿ ಚೆನ್ನಾಗಿ ಮಾಡಿದ್ದಾರೆ. ಧಾರ್ಮಿಕ ಮೌಢ್ಯದಲ್ಲಿ ಅಸಹನೆಯ ಬೇರಿದೆ. ಇದನ್ನು ಕಿತ್ತು ಹಾಕಬೇಕಿದೆ. ಪ್ರತಿಯೊಬ್ಬರು ಭ್ರಾತೃತ್ವದಿಂದ ಬಾಳಬೇಕಿದೆ ಎಂಬ ಆಶಯ ಪೆರಿನಿ ತಾಂಡವ ಕೃತಿಯ ಉದ್ದಕ್ಕೂ ಇದೆ’ ಎಂದರು.

ಪತ್ರಕರ್ತ ಬಿ.ಎಸ್.ಜಯಪ್ರಕಾಶ ನಾರಾಯಣ ಮಾತನಾಡಿ, ‘ವಿಭಿನ್ನವಾಗಿ ಅಂಕಣಗಳನ್ನು ಬರೆಯುತ್ತಿರುವ ಕೆಲವೇ ಜನರ ಪೈಕಿ ಗಣೇಶಯ್ಯನವರು ಒಬ್ಬರು’ ಎಂದು ಶ್ಲಾಘಿಸಿದರು.

*
ಒಂದು ಪತ್ರಿಕೆ, ಒಬ್ಬ ಲೇಖಕನಿಂದ ಪೂರ್ತಿ ಸತ್ಯ ಗೊತ್ತಾಗದು. ಹೆಚ್ಚು ಪತ್ರಿಕೆಗಳು, ಪುಸ್ತಕಗಳು, ದೃಷ್ಟಿಕೋನಗಳು ಪ್ರಜಾಪ್ರಭುತ್ವ ಮತ್ತು ನಮ್ಮ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಕೆ.ಸತ್ಯನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT