ADVERTISEMENT

‘ಗೆಳೆತನ ಮೀರಿದ ನಂಟು– ಸತ್ಯಕ್ಕೆ ದೂರ’

ಡಿ.ಕೆ. ರವಿ ಸಾವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 19:51 IST
Last Updated 27 ಮಾರ್ಚ್ 2015, 19:51 IST

ಬೆಂಗಳೂರು: ‘ಐಎಎಸ್ ಅಧಿಕಾರಿ ಡಿ.ಕೆ.ರವಿ ಜೊತೆ  ನನ್ನ ಪತ್ನಿ ರೋಹಿಣಿ ಸಿಂಧೂರಿ  ಗೆಳೆತನವನ್ನು ಮೀರಿದ್ದ ನಂಟು ಹೊಂದಿದ್ದರು ಎಂಬ ಸರ್ಕಾರಿ ವಕೀಲರ ವಿವರಣೆ  ಸತ್ಯಕ್ಕೆ ದೂರ’ ಎಂದು ಸುಧೀರ್‌ ರೆಡ್ಡಿ  ಹೈಕೋರ್ಟ್‌ ಗಮನಕ್ಕೆ ತಂದಿದ್ದಾರೆ.

ಈ ಕುರಿತು ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ  ಏಕಸದಸ್ಯ ಪೀಠಕ್ಕೆ  ರೆಡ್ಡಿ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಗುರುವಾರ ಲಿಖಿತ ಪ್ರತ್ಯಾಕ್ಷೇಪಣೆ ಸಲ್ಲಿಸಿದರು.

‘ಸರ್ಕಾರದ ಆಕ್ಷೇಪಣೆಗಳು ಅನಪೇಕ್ಷಿತವಾಗಿವೆ. ಸಂಪೂರ್ಣ ತಪ್ಪು ಗ್ರಹಿಕೆಗಳಿಂದ ಕೂಡಿವೆ ಮತ್ತು ಕಿರುಕುಳದ ದುರುದ್ದೇಶ ಹೊಂದಿವೆ. ಸರ್ಕಾರದ ನಡೆ ತನಿಖೆಯ ಹಾದಿ ತಪ್ಪಿಸುವಂತಿದೆ. ನನ್ನ  ಕಕ್ಷೀದಾರರ ಪತ್ನಿಯ ವೈಯಕ್ತಿಕ ಹಕ್ಕಿನ ರಕ್ಷಣೆ ಉಲ್ಲಂಘನೆಯಾಗಬಾರದು’ ಎಂದು ಅವರು ಕೋರಿದ್ದಾರೆ. 

‘ರವಿ ಸಾವಿನ ಪ್ರಕರಣದ ಯಾವುದೇ ವಸ್ತುಸ್ಥಿತಿ ವರದಿ ಬಹಿರಂಗ ಮಾಡಬಾರದು ಮತ್ತು ಸದ್ಯದ ತಡೆಯಾಜ್ಞೆಯನ್ನು ಮುಂದುವರಿಸಬೇಕು’ ಎಂದು ಕೋರಿ ಸಲ್ಲಿಸಿರುವ ಅರ್ಜಿ ಇದಾಗಿದೆ.

ರೋಹಿಣಿ ವಜಾಕ್ಕೆ ಒತ್ತಾಯ
ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳನ್ನು ಉಲ್ಲಂಘಿಸಿದ್ದು ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಲಾಗಿದೆ.

ವಿಶ್ವ ಕನ್ನಡ ಸಮಾಜದ ಸಂಸ್ಥಾಪಕ ಎಸ್‌.ಆನಂದ್‌ ಅವರು ಈ ಕುರಿತು ಶುಕ್ರವಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.

‘ರವಿ ಅವರಿಗೆ 2014ರ ಸೆಪ್ಟೆಂಬರ್‌ ತಿಂಗಳಿನಲ್ಲಿ ₨ 10 ಲಕ್ಷ ಸಾಲ ಕೊಟ್ಟಿರುವುದಾಗಿ ರೋಹಿಣಿ  ಅವರು ಸಿಐಡಿ ಡಿಐಜಿ ಸೌಮೇಂದು ಮುಖರ್ಜಿ ಅವರಿಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ನಾಗರಿಕ ಸೇವಾ ನಡತೆಯ 1966ರ ನಿಯಮ 21ರ ಉಲ್ಲಂಘನೆಯಾಗಿದೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.