ADVERTISEMENT

‘ಜನರಿಗೆ ಸ್ಪಂದಿಸುವುದು ಪ್ರಮುಖ ಕರ್ತವ್ಯ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 19:33 IST
Last Updated 4 ಅಕ್ಟೋಬರ್ 2015, 19:33 IST

ಬೆಂಗಳೂರು: ‘ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಚುನಾವಣೆಯ ಬಳಿಕವೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮುಖಂಡರ ಪ್ರಮುಖ ಕರ್ತವ್ಯ’ ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದರು.

ಮಹದೇವಪುರ ಕ್ಷೇತ್ರದ ಕಾಟಂನಲ್ಲೂರಿನಲ್ಲಿ ಬಿಜೆಪಿ ವತಿಯಿಂದ ಭಾನುವಾರ ಆಯೋಜಿಸಿದ್ದ  ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿದವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಗರದ ಸ್ವಚ್ಛತೆಯನ್ನು ಕಾಪಾಡಲು ಪಾಲಿಕೆಯ ಎಲ್ಲಾ ಸದಸ್ಯರು ಶ್ರಮಿಸಬೇಕು’ ಎಂದು ಹೇಳಿದರು. ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ‘ಸ್ಪಷ್ಟ ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ ವಾಮಮಾರ್ಗದ ಮೂಲಕ ಪಾಲಿಕೆಯ ಆಡಳಿತ ನಡೆಸುತ್ತಿದೆ. ಈ ಆಡಳಿತವನ್ನು ನಿರೀಕ್ಷಿಸಿರಲಿಲ್ಲ. ಹಾಗಾಗಿ ಈ ಆಡಳಿತ ಹೆಚ್ಚು ದಿನಗಳ ಕಾಲ  ಉಳಿಯುವುದಿಲ್ಲ’ ಎಂದು ತಿಳಿಸಿದರು. 

ಮಹದೇವಪುರ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ ಮಾತನಾಡಿ, ‘ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಪಕ್ಷ ಮತ್ತಷ್ಟು ಬಲಗೊಂಡಿದೆ ಎಂಬುದು ಸಾಬೀತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.