ADVERTISEMENT

‘ಧಾರಾವಾಹಿಯಿಂದ ಬೇಸತ್ತ ಜನ ರಂಗಭೂಮಿಯತ್ತ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ನಟಿ ಬಿ. ಜಯಶ್ರೀ ಅವರು  ವಾರ್ತಾ ಇಲಾಖೆ ನಿರ್ದೇಶಕ  ಎನ್‌.ಆರ್‌. ವಿಶುಕುಮಾರ್‌ ಅವರೊಂದಿಗೆ ಚರ್ಚಿಸಿದರು. ಕೆ. ಮರುಳಸಿದ್ದಪ್ಪ ಇದ್ದಾರೆ. –ಪ್ರಜಾವಾಣಿ ಚಿತ್ರ
ನಟಿ ಬಿ. ಜಯಶ್ರೀ ಅವರು ವಾರ್ತಾ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಅವರೊಂದಿಗೆ ಚರ್ಚಿಸಿದರು. ಕೆ. ಮರುಳಸಿದ್ದಪ್ಪ ಇದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬದುಕಿನಲ್ಲಿ ಪ್ರತಿಕ್ಷಣವೂ ಒಬ್ಬರ ಮೇಲೆ ಮತ್ತೊಬ್ಬರು ಹುನ್ನಾರ ಮಾಡುತ್ತಲೇ ಇರಬೇಕು ಎಂಬ ಕೆಟ್ಟ ನೀತಿ ಪಾಠವನ್ನು ಇಂದಿನ ಟಿ.ವಿ ಧಾರಾವಾಹಿಗಳು ಸಮಾಜಕ್ಕೆ ನೀಡುತ್ತಿವೆ. ಅಂಥ ಧಾರಾವಾಹಿಗಳಿಂದ ಬೇಸತ್ತ ಜನ ರಂಗಭೂಮಿಯತ್ತ ವಾಲುತ್ತಿದ್ದಾರೆ’ ಎಂದು ವಿಮರ್ಶಕ ಕೆ.ಮರುಳಸಿದ್ದಪ್ಪ ಹೇಳಿದರು.

ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ದಕ್ಷಿಣ ಭಾರತ ರಂಗೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹುನ್ನಾರದ ಧಾರಾವಾಹಿಗಳಿಂದ  ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು  ಆತಂಕದ ಸಂಗತಿ. 75 ವರ್ಷದ ಬದುಕಿನಲ್ಲಿ ನಾನೂ ಹುನ್ನಾರ ಮಾಡಿದ್ದೇನೆ. ನನ್ನ ವಿರುದ್ಧವೂ ಜನರು ಹುನ್ನಾರ ಮಾಡಿದ್ದಾರೆ. ಅದು ಇಂದಿನ ಧಾರಾವಾಹಿಗಳಷ್ಟಲ್ಲ’ ಎಂದು ಹೇಳಿದರು.

‘ಟಿ.ವಿ ಧಾರಾವಾಹಿಗಳು ದರಿದ್ರ ಮಟ್ಟಕ್ಕೆ  ಮುಟ್ಟುತ್ತಿವೆ. ವಿಧಿಯಿಲ್ಲದೆ ಮನರಂಜನೆಗಾಗಿ ಜನರು ಅವುಗಳ ಮೊರೆಹೋಗುತ್ತಿದ್ದಾರೆ ಎಂದು ಅವರು ಹೇಳಿದರು.  ಒಳ್ಳೆಯ ಮನರಂಜನೆ ಹಾಗೂ ಸಾಮಾಜಿಕ ಕಳಕಳಿ ಅಂಶವು ರಂಗಭೂಮಿಯಲ್ಲಿ ಇದೆ ಎಂದು ಮನದಟ್ಟು ಮಾಡಿಕೊಟ್ಟರೆ ರಂಗಭೂಮಿಯತ್ತ ಬರುವ ಜನರ ಸಂಖ್ಯೆ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.

ನಟಿ ಬಿ. ಜಯಶ್ರೀ ಮಾತನಾಡಿ, ‘ಇಂದು ಎಲ್ಲರ ಮನಸ್ಸು ವಿಕೃತವಾಗಿದೆ. ಹೃದಯದಲ್ಲಿ ಉಂಟಾಗಿರುವ ಗಲಭೆ ನಿವಾರಿಸಲು ರಂಗಭೂಮಿ, ರಂಗಮಂದಿರದ ಅಗತ್ಯವಾಗಿದೆ. ನಾಟಕ ವೀಕ್ಷಿಸಿದರೆ ಮನಸ್ಸು ಶಾಂತವಾಗುತ್ತದೆ’ ಎಂದು ಹೇಳಿದರು.

ಮೂರು ವರ್ಷದ ರೆಪರ್ಟರಿ ಕೋರ್ಸ್‌: ‘ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದಲ್ಲಿ ಮೂರು ವರ್ಷದ ರೆಪರ್ಟರಿ ಕೋರ್ಸ್‌ ಆರಂಭಿಸಲು ಚಿಂತನೆ ನಡೆದಿದೆ’ ಎಂದು ಕೇಂದ್ರದ ನಿರ್ದೇಶಕ ಸಿ. ಬಸವಲಿಂಗಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.