ADVERTISEMENT

‘ಬದ್ಧತೆಯೇ ಯಶಸ್ಸಿಗೆ ಕಾರಣ’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2015, 19:31 IST
Last Updated 29 ನವೆಂಬರ್ 2015, 19:31 IST

ಬೆಂಗಳೂರು: ‘ನವೋದಯ ಶಾಲೆಗಳ ಯಶಸ್ಸಿಗೆ ಶಿಕ್ಷಕರ ಬದ್ಧತೆ ಕಾರಣ’ ಎಂದು ದೆಹಲಿಯ ನವೋದಯ ವಿದ್ಯಾಲಯದ ಆಯುಕ್ತ ಬಿಸ್ವಜಿತ್‌ ಕುಮಾರ್ ಸಿಂಗ್‌ ಹೇಳಿದರು. ಕರ್ನಾಟಕ ನವೋದಯ ವಿದ್ಯಾರ್ಥಿ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ನವೋದಯ ಹಬ್ಬ -2015’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವೋದಯ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿ ಮಕ್ಕಳ ಭವಿಷ್ಯಕ್ಕೆ  ಭದ್ರ ಬುನಾದಿ ಹಾಕುತ್ತಿದ್ದಾರೆ. ನವೋದಯ ಶಾಲೆಗಳಲ್ಲಿ ಓದಿರುವ ಮಕ್ಕಳು ಉನ್ನತ ಹುದ್ದೆಗಳಲ್ಲಿರುವುದೇ ಇದಕ್ಕೆ ಸಾಕ್ಷಿ’ ಎಂದರು. ನವೋದಯ ವಿದ್ಯಾಲಯ ಸಮಿತಿಯ ನಿವೃತ್ತ ಜಂಟಿ ಆಯುಕ್ತ ಎ.ಎನ್.ರಾಮಚಂದ್ರ ಮಾತನಾಡಿ, ‘ನವೋದಯ ಶಾಲೆಗಳ ಹಳೆಯ ವಿದ್ಯಾರ್ಥಿಗಳು ಸಮಿತಿ ರಚಿಸಿಕೊಂಡು ಒಟ್ಟಿಗೆ ಸೇರಿರುವುದು ಉತ್ತಮ ಬೆಳವಣಿಗೆ. ಗ್ರಾಮೀಣ ಭಾಗದಲ್ಲಿ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಹೀಗಾಗಿ ಜನರಿಗೆ ಅದರ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಸಮಿತಿ ಮಾಡಬೇಕು’ ಎಂದರು.

‘ನವೋದಯ ವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು  ಶಾಲೆಗಳಲ್ಲಿ ಬೋಧನಾ ಪದ್ಧತಿಯಲ್ಲಿ ತರಬೇಕಾದ ಸುಧಾರಣೆಗಳು, ಹೊಸ ವಿಧಾನದ ಬಗ್ಗೆ ಶಿಕ್ಷಕರಿಗೆ ಸಲಹೆ ನೀಡಬೇಕು’ ಎಂದು ಹೇಳಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ ಮಾತನಾಡಿ, ‘ನಾನು ಯಾದಗಿರಿಯ ನವೋದಯ  ವಿದ್ಯಾಲಯದಲ್ಲಿ ಗ್ರಂಥಪಾಲಕನಾಗಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಅಲ್ಲಿ ದೊರೆತ ಅನುಭವದಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ’ ಎಂದು ಸ್ಮರಿಸಿಕೊಂಡರು.

‘ಎಲ್ಲ ಗ್ರಾಮಪಂಚಾಯಿತಿಗಳಲ್ಲಿಯೂ ಸಾರ್ವಜನಿಕ ಗ್ರಂಥಾಲಯಗಳಿವೆ. ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಸಮೀಪದ ಸಾರ್ವಜನಿಕ ಗ್ರಂಥಾಲಯಗಳನ್ನು ಬಳಸಬೇಕು. ಅಲ್ಲದೇ ಐಎಎಸ್, ಕೆಎಎಸ್ ಪರೀಕ್ಷೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ಪುಸ್ತಕಗಳನ್ನು ಒದಗಿಸಲಾಗುವುದು’ ಎಂದರು ಹೇಳಿದರು. ಸಮಿತಿಯ ಅಧ್ಯಕ್ಷ ಪಿ.ಸೋಮೇಶ್‌, ‘ದೇಶದಲ್ಲಿ ನವೋದಯ ಶಾಲೆಗಳಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ 12 ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ನವೋದಯ ಶಾಲೆಗಳು ಕೇಂದ್ರ ಸರ್ಕಾರದ ಅಡಿ ಬರುತ್ತವೆ. ನಿವೃತ್ತ ಶಿಕ್ಷಕರಿಗೆ ಪಿಂಚಣಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.