ADVERTISEMENT

‘ಮೂರ್ತಿ ಪ್ರತಿಭೆ ನಿರ್ಲಕ್ಷಿಸಿದ ರಾಜ್ಯ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 19:30 IST
Last Updated 19 ಏಪ್ರಿಲ್ 2014, 19:30 IST

ಬೆಂಗಳೂರು: ‘ವಿ.ಕೆ.ಮೂರ್ತಿ ಅವರಿಗೆ  ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ದೊರೆತರೂ, ರಾಜ್ಯದಿಂದ ಒಂದು ಪ್ರಶಸ್ತಿಯೂ ದೊರೆಯಲಿಲ್ಲ. ಇದು ಕನ್ನಡದ ದುರಂತ’ ಎಂದು ಚಿತ್ರ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ಬಾಬು ವಿಷಾದಿಸಿದರು.

ಗಾನ ಸುಧಾ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಚಲನಚಿತ್ರ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರ ನೆನಪಿನ ಸಂವಾದ ಕಾರ್ಯಕ್ರಮ’ ದಲ್ಲಿ ಅವರು ಮಾತನಾಡಿದರು.

‘ಅಹಂಕಾರವಿಲ್ಲದ ವ್ಯಕ್ತಿ, ಅದ್ಭುತವಾದ ಛಾಯಾಗ್ರಾಹಕನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವಲ್ಲಿ ಕರ್ನಾಟಕ ಸೋತಿದೆ ಎಂದೆನಿಸುತ್ತದೆ. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು  ಬ್ರಹ್ಮ ಜ್ಞಾನಿಗಳು, ಅವರ ನಿರ್ಧಾರವೇ ಅಂತಿಮವಾಗಿರುತ್ತದೆ’ ಎಂದು ವ್ಯಂಗ್ಯವಾಡಿದರು.

‘ಈಗ ಕನ್ನಡ ಚಿತ್ರರಂಗಕ್ಕೆ ಗ್ರಹಣ ಹಿಡಿದಿದೆ. ವಿನಾಶದ ಅಂಚಿನಲ್ಲಿದೆ. ಇಂದಿನ ಸಿನಿಮಾಗಳನ್ನು ನೋಡಲೂ ನಾಚಿಕೆಯಾಗುತ್ತದೆ. ಇಂದಿನ ನಾಯಕರಿಗೆ ಕನ್ನಡದ ಒಳ್ಳೆಯ ಕಥೆಗಳು ಅರ್ಥವೇ ಆಗುವುದಿಲ್ಲ. ಕನ್ನಡದಲ್ಲಿ ಕಥೆಗಳಿಲ್ಲ, ರಿಮೇಕ್‌ ಮಾಡಿ ಎಂದು ಕೆಲವು ಸಾಹಿತಿಗಳೇ ಹೇಳುತ್ತಾರೆ’ ಎಂದರು.

‘ಕನ್ನಡ ಚಿತ್ರರಂಗಕ್ಕೆ ಈಗ ಕಾಯಕಲ್ಪ ಬೇಕಾಗಿದೆ. 60–70 ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರಜ್ವಲಿಸಿದ ರೀತಿ ಮತ್ತೆ ಪ್ರಜ್ವಲಿಸಬೇಕಾಗಿದೆ. ವಿ.ಕೆ.ಮೂರ್ತಿ ಅವರಂತಹ ಸಹನಶೀಲತೆಯುಳ್ಳ ಛಾಯಾಗ್ರಾಹಕರು ಬೇಕಾಗಿದ್ದಾರೆ. ಆದರೆ, ಇಂದು ಯಾರಿಗೂ ಸಹನೆಯಿಲ್ಲ. ಛಾಯಾಗ್ರಹಣ ಎಂಬುದು ಮದುವೆಯ ವಿಡಿಯೋ ತೆಗೆಯುವಂತೆ ಎಂಬಂತಾಗಿದೆ’ ಎಂದು ಹೇಳಿದರು.

‘ವಿ.ಕೆ.ಮೂರ್ತಿ ಅವರ ಛಾಯಾಗ್ರಹಣದ ಚಿತ್ರ ‘ಕಾಗಜ್‌ ಕೆ ಫೂಲ್‌’ ಈಗ ಕಲಾತ್ಮಕ ಚಿತ್ರ ಎಂದು ಗುರುತಿಸುತ್ತಾರೆ. ಆದರೆ, ಆಗ ಅದನ್ನು ಯಾರೂ ನೋಡಿಯೇ ಇಲ್ಲ’ ಎಂದು ನುಡಿದರು. ಲೇಖಕಿ ಉಮಾ ರಾವ್‌ ಮಾತನಾಡಿ, ‘ಬಾಲಕರಾಗಿದ್ದಾಗ ಅವರಿಗೆ ಕಾಡುತ್ತಿದ್ದ ಒಂಟಿತನವೇ ಅವರನ್ನು ಸಂಗೀತದತ್ತ ಸೆಳೆಯಿತು. ಕೊನೆಯವರೆಗೂ ಅವರನ್ನು ಸಂಗೀತ ಮತ್ತು ಛಾಯಾಗ್ರಹಣ ಕೈ ಹಿಡಿದು ಕಾಪಾಡಿದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.