ADVERTISEMENT

‘ಮೇಯರ್ ಕಪ್’ ಕಬಡ್ಡಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:30 IST
Last Updated 5 ಮಾರ್ಚ್ 2015, 19:30 IST

ಬೆಂಗಳೂರು: ವಿಜಯನಗರದ ಎಂ.ಸಿ. ಬಡಾವಣೆಯ ಬಾಲಗಂಗಾಧರನಾಥ ಸ್ವಾಮೀಜಿ ಮೈದಾನದಲ್ಲಿ ಆಯೋಜಿಸಿರುವ ‘ಮೇಯರ್ ಕಪ್’ ಅಖಿಲ ಭಾರತ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಟೂರ್ನಿಗೆ ಗುರುವಾರ ಸಂಜೆ ಮೇಯರ್ ಎನ್.ಶಾಂತಕುಮಾರಿ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಂತಕುಮಾರಿ ಅವರು, ‘ಮೊಬೈಲ್, ಕಂಪ್ಯೂಟರ್ ರೀತಿ ಸಾಧನಗಳು ಯುವಕರ ಜೀವನದ ಅವಿಭಾಜ್ಯ ಅಂಗವಾಗಿವೆ. ಪರಿಣಾಮ, ದೈಹಿಕ ಮತ್ತು ಮಾನಸಿಕ ಶಕ್ತಿ ಒದಗಿಸುವ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಪಾಶ್ಚಿಮಾತ್ಯ ಕ್ರೀಡೆಗಳು ಪ್ರೋತ್ಸಾಹ ಪಡೆಯುತ್ತಿವೆ’ ಎಂದು ವಿಷಾದಿಸಿದರು.

‘ದೇಶೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಟೂರ್ನಿ ಆಯೋಜಿಸಲಾಗಿದೆ. ಕಬಡ್ಡಿಯು ಜನರಿಗೆ ಮನರಂಜನೆ, ಒಗ್ಗಟ್ಟಿನ ಸಂದೇಶದ ನೀಡುವ ಜತೆಗೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುತ್ತದೆ. ಇಂತಹ ಸಾಂಸ್ಕೃತಿಕ ಪರಂಪರೆಯುಳ್ಳ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಮತ್ತು ಯುವಜನರಲ್ಲಿ ಕ್ರೀಡಾಮನೋಭಾವ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು’ ಎಂದು ತಿಳಿಸಿದರು.

ಗುರುವಾರದಿಂದ (ಮಾ.5) ಮಾರ್ಚ್ 8ರ ವರೆಗೆ ನಡೆಯುವ ಈ ಟೂರ್ನಿಯಲ್ಲಿ ದೆಹಲಿ, ಮಹಾರಾಷ್ಟ್ರ, ಗುಜರಾತ್, ಕೇರಳ, ತಮಿಳುನಾಡು, ಮಧ್ಯಪ್ರದೇಶ   ವಿವಿಧ   ರಾಜ್ಯಗಳ 22 ಪುರುಷರ ಮತ್ತು 16 ಮಹಿಳಾ ತಂಡಗಳು ಭಾಗವಹಿಸಿವೆ.

ಟೂರ್ನಿಗೆ ಚಾಲನೆ ಸಿಗುತ್ತಿದ್ದಂತೆ ಮಹಿಳಾ ವಿಭಾಗದಲ್ಲಿ ಮೂಡುಬಿದರೆ ಆಳ್ವಾಸ್ ತಂಡದ ವಿರುದ್ಧ ಚೆನ್ನೈನ ಕಬಡ್ಡಿ ಸ್ಟಾರ್ ತಂಡ ಮತ್ತು ವಿಜಯನಗರ ತಂಡ ವಿರುದ್ಧ ಕೊಯಿಮತ್ತೂರಿನ ಮಾರ್ಟಿನ್ ತಂಡ ಮೈದಾನಕ್ಕಿಳಿದವು. ವಿಜಯಾ ಬ್ಯಾಂಕ್ ತಂಡದ ವಿರುದ್ಧ ದೆಹಲಿಯ ಸೇನಾ ತಂಡ ಸೆಣಸಾಟ ಆರಂಭಿಸಿದವು.

ಉಪಮೇಯರ್ ಕೆ.ರಂಗಣ್ಣ, ಪಾಲಿಕೆ ಸದಸ್ಯರಾದ ಗಂಗಬೈರಯ್ಯ, ಮೋಹನ್ ಕುಮಾರ್, ಕೆ.ಉಮೇಶ್ ಶೆಟ್ಟಿ, ವಿ.ವಾಗೀಶ್, ಆರ್.ಪ್ರಕಾಶ್, ಟಿ.ವಿ. ಕೃಷ್ಣ, ಆನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.