ADVERTISEMENT

‘ಮೇ 30ರೊಳಗೆ ಚುನಾವಣೆ ನಡೆಸಿ’

ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 20:26 IST
Last Updated 30 ಮಾರ್ಚ್ 2015, 20:26 IST
‘ಮೇ 30ರೊಳಗೆ ಚುನಾವಣೆ ನಡೆಸಿ’
‘ಮೇ 30ರೊಳಗೆ ಚುನಾವಣೆ ನಡೆಸಿ’   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಮೇ 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ವಿಲೇವಾರಿ ಮಾಡಿತು.

ಹೊಸ ಚುನಾಯಿತ ಸದಸ್ಯರಿಗೆ ಆಡಳಿತ ಹಸ್ತಾಂತರಿಸುವ  ಎಲ್ಲ ಪ್ರಕ್ರಿಯೆಗಳು ಮೇ 30ರ ಒಳಗೆ ಪೂರ್ಣಗೊಳ್ಳಬೇಕು ಎಂದು ಪೀಠ ಸೂಚಿಸಿದೆ.

‘ನಿಗದಿತ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಹೊಸ ಸದಸ್ಯರ ಆಡಳಿತ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳು ಸ್ಪಷ್ಟವಾಗಿವೆ. ಹಾಗಾಗಿ ಚುನಾವಣೆ ಮುಂದೂಡಿಕೆಗೆ ರಾಜ್ಯ ಸರ್ಕಾರ ಸಬೂಬು ಹೇಳುತ್ತಿರುವುದು ಸಲ್ಲ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

‘ಸರ್ಕಾರ ಬಿಬಿಎಂಪಿಯನ್ನು ವಿಭಜನೆ ಮಾಡುವ ಅಥವಾ ಅವಧಿ ಪೂರ್ಣಗೊಂಡ ನಂತರ ಆಡಳಿತಾಧಿಕಾರಿ ನೇಮಕ ಮಾಡುವ  ಕಾರಣ

ಬಿಬಿಎಂಪಿ ವಿಭಜನೆ ಕಾರಣ ನೀಡಿ ಚುನಾವಣೆ
ಮುಂದೂಡುವ ಇರಾದೆಯಲ್ಲಿದ್ದ ಸರ್ಕಾರದ ನಿಲುವು ಸಾಂವಿಧಾನಿಕವಾಗಿ ಸಿಂಧುವಾಗಿರಲಿಲ್ಲ. ಹೈಕೋರ್ಟ್‌ ಆದೇಶ ಸಮರ್ಪಕವಾಗಿದೆ. 
ಎ.ವಿ.ನಿಶಾಂತ್‌, ಅರ್ಜಿದಾರರ ಪರ ವಕೀಲ

ನೀಡಿರುವುದು ಸಮರ್ಥನೀಯವಾಗಿಲ್ಲ. ಬಿಬಿಎಂಪಿ ವಿಭಜನೆ ಎಂದರೆ ಅದು ಪೆನ್ನಿನಲ್ಲಿ ಗೆರೆ ಎಳೆದಷ್ಟು ಸುಲಭವಲ್ಲ’ ಎಂದಿದೆ.

ಆಯೋಗಕ್ಕೆ ಚಾಟಿ: ‘ವಾರ್ಡ್‌ಗಳ ಮರುವಿಂಗಡಣೆ ಮತ್ತು ಹೊಸ ಮತದಾರರ ಪಟ್ಟಿ ತಯಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಚುನಾವಣಾ ಆಯೋಗ ಅಸಹಾಯಕತೆ ವ್ಯಕ್ತಪಡಿಸಿರುವುದು ಸರಿಯಲ್ಲ.  ರಾಜ್ಯ ಸರ್ಕಾರ ಈ ದಿಸೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬುದು ಅರಿವಿಗೆ ಬಂದ ಕೂಡಲೇ ನೀವ್ಯಾಕೆ ಕೋರ್ಟ್‌ಗೆ ಬರಲಿಲ್ಲ’ ಎಂದು  ಆಯೋಗಕ್ಕೂ  ಪೀಠ ಚಾಟಿ ಬೀಸಿದೆ.

‘2020ರ ಬಿಬಿಎಂಪಿ ಚುನಾವಣೆಗೆ ಈಗಲೇ ಮೀಸಲು ಪಟ್ಟಿ ತಯಾರಿ ನಡೆಸಿ’ ಎಂದೂ ಪೀಠವು ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಏಪ್ರಿಲ್‌ 22ಕ್ಕೆ ಈಗಿನ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗುತ್ತಿದೆ. ಆದರೂ ರಾಜ್ಯ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಲು ಯಾವುದೇ ತಯಾರಿ ಮಾಡಿಕೊಂಡಿಲ್ಲ ಎಂದು ಪಾಲಿಕೆ ಸದಸ್ಯರಾದ ಸಿ.ಕೆ.ರಾಮಮೂರ್ತಿ ಹಾಗೂ  ಬಿ.ಸೋಮಶೇಖರ್‌ ಈ ರಿಟ್‌ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT