ADVERTISEMENT

‘ರಾಷ್ಟ್ರೀಯ ಪುರಾಣಗಳ ಸಂದೇಶ’ ಸಮಾವೇಶ

ಇಸ್ಕಾನ್‌ನಲ್ಲಿ ಜೂನ್‌ 23ರಿಂದ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:19 IST
Last Updated 3 ಜೂನ್ 2015, 20:19 IST

ಬೆಂಗಳೂರು: ವೇದಗಳು, ಉಪನಿಷತ್‌ಗಳು ಹಾಗೂ ಪುರಾಣಗಳಲ್ಲಿನ ಜ್ಞಾನ ಪರಂಪರೆ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಾರತೀಯ ವಿದ್ಯಾ ಭವನವು ಜೂನ್‌ 23 ರಿಂದ ಐದು ದಿನಗಳ ಕಾಲ ನಗರದಲ್ಲಿ  ‘ರಾಷ್ಟ್ರೀಯ ಮಹಾಪುರಾಣಗಳ ಸಂದೇಶ’ ಸಮಾವೇಶವನ್ನು ಹಮ್ಮಿಕೊಂಡಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್‌ ‘ನಗರದ ಕಾರ್ಡ್‌ ರಸ್ತೆಯ  ಇಸ್ಕಾನ್‌ನ ಮಲ್ಟಿವಿಷನ್‌ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಸಮಾವೇಶದಲ್ಲಿ ‘ಮಹಾ ಪುರಾಣಗಳಲ್ಲಿನ ಪರಿಸರ ಜ್ಞಾನ’, ‘ಜೈನ ಮಹಾ ಪುರಾಣಗಳು’, ‘ಪುರಾಣಗಳಲ್ಲಿ ವಿಜ್ಞಾನ’, ‘ಕಾಶ್ಮೀರಿ ನೀಲಿಮಾ ಪುರಾಣದ ಸಾಂಸ್ಕೃತಿಕ ಪ್ರಸ್ತುತತೆ’, ‘ಪುರಾಣಗಳ ಮೂಲಕ ರಾಷ್ಟ್ರೀಯ ಐಕ್ಯ’, ‘ಪುರಾಣಗಳಲ್ಲಿ ಭಗವದ್ಗೀತೆ’, ‘ಪುರಾಣಗಳಲ್ಲಿ ಯೋಗದ ಪರಿಕಲ್ಪನೆ’ ವಿಷಯಗಳ ಕುರಿತು ತಜ್ಞ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಜಮ್ಮುವಿನ ಪ್ರೊ.ವೇದ ಕುಮಾರಿ ಘಾಯ್‌, ಗೋರಖ್‌ಪುರದ ಪ್ರೊ.ಮುರಳಿ ಮನೋಹರ್‌ ಪಾಠಕ್‌, ತಿರುಪತಿಯ ಡಾ.ಕೆ.ಇ.ದೇವನಾಥನ್‌, ನಗರದ ಎಚ್‌.ಎಸ್‌.ನಾಗಭೂಷಣ್‌ ಭಟ್‌ ಹಾಗೂ ಕೆ.ಟಿ. ಪಾಂಡುರಂಗಿ ಅವರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.

‘ಪುರಾಣಗಳಲ್ಲಿನ ಮಹತ್ವದ ವಿಷಯಗಳನ್ನು ಕಲೆ, ನೃತ್ಯ, ಸಂಗೀತ, ನಾಟಕಗಳ ಮೂಲಕ ಪ್ರಸ್ತುತ ಪಡಿಸಲಾಗುತ್ತಿದ್ದು, ಸಮ್ಮೇಳನವನ್ನು www.intlarts.org ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.