ADVERTISEMENT

‘ವಂಶವೃಕ್ಷದಿಂದ ಸೃಜನಶೀಲ ಲೇಖಕ’

ಸಾಹಿತಿ ಎಸ್‌.ಎಲ್‌.ಭೈರಪ್ಪ ಅಭಿಮಾನಿ ಕೂಟದಿಂದ ಕಾದಂಬರಿಯ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜುಲೈ 2015, 20:07 IST
Last Updated 11 ಜುಲೈ 2015, 20:07 IST

ಬೆಂಗಳೂರು: ‘ಒಬ್ಬ ಸೃಜನಶೀಲ ಲೇಖಕನಾಗಿ ರೂಪುಗೊಳ್ಳಲು ವಂಶವೃಕ್ಷ ಕಾದಂಬರಿಯೇ ಪ್ರಾರಂಭಿಕ ಹಾದಿ’ ಎಂದು ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ನೆನಪಿಸಿಕೊಂಡರು.

‘ಎಸ್‌.ಎಲ್‌.ಭೈರಪ್ಪ ಕಾದಂಬರಿ ಪ್ರಿಯರ ಕೂಟ (ಫೇಸ್ ಬುಕ್‌ ಅಭಿಮಾನಿಗಳ ಕೂಟ)’ದ ವತಿಯಿಂದ ನಗರದ ಗೋಖಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ವಂಶವೃಕ್ಷ ಕಾದಂಬರಿ ಸುವರ್ಣ ಮಹೋತ್ಸವ’ ಹಾಗೂ ಸಂವಾದದಲ್ಲಿ ಅವರು ಮಾತ ನಾಡಿದರು.

ವಂಶವೃಕ್ಷ ಕಾದಂಬರಿಗೂ ಮುನ್ನ ‘ದೂರ ಸರಿದರು’, ‘ಭೀಮಕಾಯ’ ಮತ್ತಿತರ ಕಾದಂಬರಿಗಳನ್ನು ಬರೆದಿದ್ದೆ.  ಭಾರತೀಯ ತತ್ವಶಾಸ್ತ್ರ, ವೇದ ಉಪ ನಿಷತ್‌, ಧರ್ಮಶಾಸ್ತ್ರ ಮತ್ತಿತರ ವಿಷಯ ಗಳ ಅಧ್ಯಯನ ಮಾಡಿ ವಂಶವೃಕ್ಷ ಕಾದಂಬರಿ ರಚಿಸಿದೆ ಎಂದು ಅವರು ಹೇಳಿದರು. 

ಈ ಕಾದಂಬರಿಯಲ್ಲಿ ಬರುವ  ಸದಾಶಿವರಾಯರು ಹಾಗೂ ಕರುಣಾರತ್ನೆ ಪಾತ್ರಗಳಿಗೆ ಕೋಲ್ಕತ್ತ ವಿವಿಯ ಪ್ರಾಧ್ಯಾ ಪಕ ಸುರೇಂದ್ರನಾಥ ದಾಸ್‌ಗುಪ್ತ ಹಾಗೂ ಅವರ ಪತ್ನಿ ಸುರಮಾ ದಾಸ್‌ ಗುಪ್ತ ಸ್ಫೂರ್ತಿ. ಕಾದಂಬರಿ ಬರೆಯುವ ಮುನ್ನ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದ್ದೆ ಎಂದು ಅವರು ಹೇಳಿದರು.

ಪುರಾತನ ಮೌಲ್ಯಗಳು ಹಾಗೂ ಆಧುನಿಕ ಮೌಲ್ಯಗಳ ನಡುವಿನ ಸಂಘ ರ್ಷದ ಬಗ್ಗೆ ಕಾದಂಬರಿಯಲ್ಲಿ ಬೆಳಕು ಚೆಲ್ಲಲಾಗಿದೆ. ಇದು ಕಾದಂಬರಿಯ ಮೂಲ ಸತ್ವ ಎಂದು ಅವರು ತಿಳಿಸಿದರು.

ವಂಶವೃಕ್ಷ ಕಾದಂಬರಿಯನ್ನು ಉರ್ದುವಿಗೆ ಅನುವಾದಿಸಿದ ಸಯ್ಯದ್‌ ಶಹಾಬುದ್ದೀನ್‌ ಮಾತನಾಡಿ, ‘ಈ ಕಾದಂಬರಿ ಉರ್ದುವಿನಲ್ಲಿ ತುಂಬಾ ಪ್ರಖ್ಯಾತಿ ಗಳಿಸಿತು. ಇದಕ್ಕೆ ಭೈರಪ್ಪ ಅವರಿಗೆ  ಕೃತಜ್ಞ’ ಎಂದರು.

ನಿರ್ದೇಶಕ ಪಿ. ಶೇಷಾದ್ರಿ ಮಾತ ನಾಡಿದರು. ವಂಶವೃಕ್ಷ ನಾಟಕದ ನಿರ್ದೇಶಕ ಡಾ.ಶ್ರೀಧರಮೂರ್ತಿ, ಶತಾ ವಧಾನಿ ಆರ್‌. ಗಣೇಶ್‌, ಹಿರಿಯ ನಟಿ ಎಲ್‌.ವಿ. ಶಾರದಾ ಮತ್ತಿತರರು ಇದ್ದರು.

ವಂಶವೃಕ್ಷ ಕಾದಂಬರಿ ಪ್ರಕಟ ಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಅಭಿಮಾನಿಗಳು ಈ ಸಂವಾದ ಆಯೋಜಿಸಿದ್ದರು. ಈ ಕೂಟ ದಲ್ಲಿ 6,500 ಸದಸ್ಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.