ADVERTISEMENT

‘ವರ್ತಮಾನದ ಸಂಗತಿ ಸ್ಮರಿಸೋಣ’

‘ನೆಲದ ಮರೆಯ ನಿದಾನ’ ಮಾಲಿಕೆಯಲ್ಲಿ ಕಮಲಾ ಹಂಪನಾ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST

ಬೆಂಗಳೂರು: ‘ವರ್ತಮಾನದಲ್ಲಿ ನಿಂತು ಭವಿಷ್ಯತ್ತಿನ ಸೌಧ ಕಟ್ಟಬೇಕಾದರೆ ನಾವು ವರ್ತಮಾನದ ಸಂಗತಿಗಳನ್ನು ಸ್ಮರಿಸಿಕೊಳ್ಳುತ್ತಿರಬೇಕು’ ಎಂದು ಸಾಹಿತಿ ಕಮಲಾ ಹಂಪನಾ ಅಭಿಪ್ರಾಯಪಟ್ಟರು.

ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ  ‘ನೆಲದ ಮರೆಯ ನಿದಾನ’ ಮಾಲಿಕೆ ಯಲ್ಲಿ ತಿರುಮಲೆ ರಾಜಮ್ಮ – ಎಂ.ಕೆ.ಇಂದಿರಾ ಅವರ ಬದುಕು ಬರಹ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಯಾವುದೇ ಸೌಕರ್ಯಗಳು ಇಲ್ಲದ ಕಾಲಘಟ್ಟದಲ್ಲಿ  ನಮ್ಮ ಪೂರ್ವಸೂರಿಗಳು ತುಂಬಾ ಕಷ್ಟಪಟ್ಟಿದ್ದಾರೆ. ಅಂತಹವರನ್ನು ಸ್ಮರಿಸುವ ಈ ಮಾಲಿಕೆಯಲ್ಲಿ ಸಾಮಾಜಿಕ, ಪ್ರಾದೇಶಿಕ ನ್ಯಾಯ ಕಾಪಾಡಿಕೊಳ್ಳಬೇಕು. ಆರಂಭದಲ್ಲಿಯೇ ಮಹಿಳೆಯರ ಸ್ಮರಣೆಯಿಂದ ಇದಕ್ಕೆ ಚಾಲನೆ ನೀಡಿದ್ದು ಶ್ಲಾಘನೀಯ’ ಎಂದು ಹೇಳಿದರು.

‘ನಮಗೆ ಕನ್ನಡ ಗೊತ್ತಿಲ್ಲ ಎಂದು ಮಕ್ಕಳು, ಮೊಮ್ಮಕ್ಕಳು ಹೇಳುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂಗ್ಲಿಷ್‌ ಭ್ರಮೆಗೆ ಒಳಗಾಗಿರುವ ಪಾಲಕರಲ್ಲಿ ಕನ್ನಡ ಓದಿದವರು ದಡ್ಡರು ಎಂಬ ಮೌಢ್ಯ ಭಾವನೆ ಮೂಡುತ್ತಿದೆ. ಇದು ಆತಂಕದ ಸಮಯ. ಕನ್ನಡ ಉಳಿಯದಿದ್ದರೆ ನಾಡು ಎಲ್ಲಿ ಉಳಿಯುತ್ತದೆ? ಈ ಹಿಂದಿನಂತೆ ಹರಿದು ಹಂಚಿಹೋಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯ ಭಾಷೆಯನ್ನು ಕಲಿಕಾ ಮಾಧ್ಯಮವನ್ನಾಗಿ ಮಾಡಬೇಕು. ಪೂರ್ವ ಪ್ರಾಥಮಿಕ ತರಗತಿಯಿಂದಲೇ ಮಕ್ಕಳಿಗೆ ಸಂವಹನ ಭಾಷೆಯಾಗಿ ಇಂಗ್ಲಿಷನ್ನು ಸದೃಢವಾಗಿ ಕಲಿಸುವ ಕಾರ್ಯ ನಡೆಯಬೇಕು. ಇದಕ್ಕಾಗಿ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಬೇಕು’ ಎಂದು ಆಗ್ರಹಿಸಿದರು.

ಸಾಹಿತಿ ನಾಗಮಣಿ ಎಸ್‌.ರಾವ್‌ ಮಾತನಾಡಿ, ‘ಅಲ್ಪ ಶಿಕ್ಷಣ ಪಡೆದಂತಹ ತಿರುಮಲೆ ರಾಜಮ್ಮ ಮತ್ತು ಎಂ.ಕೆ.ಇಂದಿರಾ ಅವರು ಮಹಿಳಾ ಸಾಹಿತ್ಯ ರಚನೆ ವಿರಳವಾಗಿದ್ದ ಕಾಲಘಟ್ಟದಲ್ಲಿ ಬಾಲ್ಯ, ವಿಧವಾ ಮತ್ತು ವಿಷಮ ವಿವಾಹಗಳು ಹಾಗೂ ವೇಶ್ಯಾವಾಟಿಕೆ ಕುರಿತಂತೆ ಅನೇಕ ಸಾಮಾಜಿಕ ಕಳಕಳಿಯ ವಿಷಯಗಳ ಕುರಿತು ಬಹು ಮೌಲಿಕವಾದ ಕೃತಿಗಳನ್ನು ರಚಿಸಿದ್ದಾರೆ. ಹೊಸ ಪೀಳಿಗೆಯವರಿಗೆ ಅವರ ನೆನಪೇ ಚೈತನ್ಯ ತುಂಬುವಂತಹದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಹಿರಿಯರ ನೆನಪನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಮತ್ತು ಅವರ ಕೃತಿಗಳನ್ನು ಪುನರ್‌ ಮೌಲ್ಯಮಾಪನ ಮಾಡಿಸಬೇಕೆಂಬ ಉದ್ದೇಶದಿಂದ ಈ ಮಾಲಿಕೆ ಹಮ್ಮಿಕೊಳ್ಳಲಾಗಿದೆ. ಇವತ್ತು ಹಿಂದಿನಂತೆ ಮಹಿಳೆಯರು ನಾಟಕ ಬರೆಯುತ್ತಿಲ್ಲ. ಇದು ವಿಷಾದದ ಸಂಗತಿ. ಜನಸಾಮಾನ್ಯರ ಮನವನ್ನು ಸುಲಭವಾಗಿ ತಟ್ಟಿ, ಪರಿವರ್ತಿಸಬಲ್ಲ ನಾಟಕ ಪರಿಣಾಮಕಾರಿ ಸಂವಹನ ಮಾಧ್ಯಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.