ADVERTISEMENT

‘ಸಚಿವ ಮಹದೇವಪ್ಪ ಅವರಿಗೆ ವಹಿಸಿ....’

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 20:04 IST
Last Updated 24 ಜುಲೈ 2014, 20:04 IST

ಬೆಂಗಳೂರು: ‘ಸಿ.ಎಂ.ಗೆ ಸಮಯ ಇಲ್ಲ. ಹೀಗಾಗಿ ನೀರಾವರಿ ಯೋಜನೆಗಳ ಉಸ್ತುವಾರಿಯನ್ನೂ ಲೋಕೋಪಯೋಗಿ ಇಲಾಖೆಗೆ ಕೊಟ್ಟು ಬಿಡಿ....’ ಹೀಗೆ ವಿಧಾನಸಭೆಯಲ್ಲಿ ಹೇಳಿದ್ದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ.

ಜಲಸಂಪನ್ಮೂಲ ಇಲಾಖೆಯ ಬೇಡಿಕೆಗಳ ಮೇಲೆ ಬಿಜೆಪಿಯ ಬಸವರಾಜ ಬೊಮ್ಮಾಯಿ ಮಾತ ನಾಡುತ್ತಾ, ‘ನೀರಾವರಿ ಯೋಜನೆಗಳ ಉನ್ನತಾ ಧಿಕಾರ ಸಮಿತಿಯ ಸಭೆಯನ್ನು ಹೊಸ ಸರ್ಕಾರ ಬಂದ ಮೇಲೆ ಒಮ್ಮೆ ಮಾತ್ರ ನಡೆಸಲಾಗಿದೆ. ಮುಖ್ಯಮಂತ್ರಿಯವರಿಗೆ ಸಮಯವೇ ಸಿಗುತ್ತಿಲ್ಲ. ಇದು ಈ ಸರ್ಕಾರದ ಬದ್ಧತೆ’ ಎಂದು ಟೀಕಿಸಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷರು, ‘ಸಿ.ಎಂ.ಗೆ ಸಮಯ ಇಲ್ಲ. ಹೀಗಾಗಿ ಅದನ್ನು ಲೋಕೋಪಯೋಗಿ ಸಚಿವರಿಗೆ ವಹಿಸಿ’ ಎಂದು ಡಾ.ಎಚ್‌.ಸಿ.ಮಹದೇವಪ್ಪ ಅವರತ್ತ ಕೈತೋರಿಸಿದರು. ಬೊಮ್ಮಾಯಿ ಮಾತನಾಡಿ, ‘ಮಹದೇವಪ್ಪ ಅವರಿಗೆ ಈಗಾಗಲೇ ಭಾರ ಜಾಸ್ತಿಯಾಗಿದೆ. ಅವರು ಒಂದು ರೀತಿ ಮುಖ್ಯಮಂತ್ರಿಯ ಹಾಗೆ ಕಾರ್ಯನಿರ್ವಹಿಸುತ್ತಿದ್ದಾರೆ (ಡಿ ಫ್ಯಾಕ್ಟೊ ಸಿ.ಎಂ)’ ಎಂದು ಕಾಲೆಳೆದರು.

ಪುನರ್‌ವಸತಿಗೆ ಆದ್ಯತೆ:  ನೀರಾವರಿ ಯೋಜನೆಗೆ ₨ 10 ಸಾವಿರ ಕೋಟಿ ಕೊಡುವ ಹಾಗೆ ಪುನರ್‌ವಸತಿ ಯೋಜನೆಗಳಿಗೂ ಪ್ರತಿ ವರ್ಷ ಕನಿಷ್ಠ ₨ 5000 ಕೋಟಿ ಮೀಸಲು ಇಡಬೇಕು. ಆಗ ಮಾತ್ರ ಯೋಜನೆಗಳ ಪ್ರಗತಿ ತೀವ್ರಗತಿ ಪಡೆಯಲಿದೆ’ ಎಂದು ಬೊಮ್ಮಾಯಿ ಹೇಳಿದರು. ಎತ್ತಿನಹೊಳೆಯಿಂದ ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೈಪುಗಳ ಮೂಲಕ ಸರಬರಾಜು ಮಾಡುವುದರಿಂದ ಪ್ರಯೋಜನ ಇಲ್ಲ. ಅದರ ಬದಲು, ಕೆರೆ ತುಂಬಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಶೇ 19 ಅರಣ್ಯ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ನೆಡುತ್ತಿರುವ ಗಿಡಗಳಲ್ಲಿ ಶೇ 30ರಷ್ಟು ಮಾತ್ರ ಉಳಿಯುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡರು.  ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ವಿ.ಸೋಮಣ್ಣ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಪ್ರತಿವರ್ಷ ಲಕ್ಷಾಂತರ ಗಿಡಗಳನ್ನು ನೆಡಲಾಗುತ್ತಿದೆ.

ಈ ಗಿಡಗಳು ಬದುಕಿದ್ದರೆ ಸಮೃದ್ಧ ಅರಣ್ಯ ಇರಬೇಕಿತ್ತು. ಆದರೆ, ರಾಜ್ಯದಲ್ಲಿ ಈಗ ಶೇ 19ರಷ್ಟು ಮಾತ್ರ ಅರಣ್ಯ ಇದೆ ಎಂದು ಬಹಿರಂಗಪಡಿಸಿದರು. ರಸ್ತೆ ವಿಸ್ತರಣೆ, ಮೆಟ್ರೊ ಕಾಮಗಾರಿ, ನಗರೀ ಕರಣ ಮತ್ತಿತರ ಕಾಮಗಾರಿ ಗಳಿಗಾಗಿ ನಗರದಲ್ಲಿ 2010ರಿಂದ ಇಲ್ಲಿಯ ವರೆಗೆ ಬಿಬಿಎಂಪಿಯು 7,853 ಮರಗಳನ್ನು ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮವು 1,428 ಮರಗಳನ್ನು ಕಡಿದಿದೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT