ADVERTISEMENT

‘ಹಿರಿಯರ ಅನುಭವ ಹಂಚಿಕೆಯಾಗಲಿ’

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 20:15 IST
Last Updated 28 ಜುಲೈ 2015, 20:15 IST

ಬೆಂಗಳೂರು : ‘ಹಿರಿಯರ ಅನುಭವ ಹಂಚಿಕೊಳ್ಳುವ ಕಮ್ಮಟಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ನೈತಿಕ ಪ್ರಜ್ಞೆ, ಸಂಬಂಧಗಳ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಅಭಿಪ್ರಾಯಪಟ್ಟರು.

ರಾಮಮೂರ್ತಿ ನಗರದಲ್ಲಿ ಮಂಗಳವಾರ ಹಿರಿಯರ ವೇದಿಕೆ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕ ಶಿಕ್ಷಣದಲ್ಲಿ ಸಂಸ್ಕಾರವೇ ಇಲ್ಲ. ಹೀಗಾಗಿ, ಮಕ್ಕಳಲ್ಲಿ ನೈತಿಕ ಮಟ್ಟ ಕುಸಿಯುತ್ತ, ಯುವ ಜನಾಂಗ ಹಾದಿ ತಪ್ಪುತ್ತಿದೆ. ಇದನ್ನು ಸರಿ ದಾರಿಗೆ ತರಲು ಅಲ್ಲಲ್ಲಿ ಹಿರಿಯರ ಅನುಭವಗಳನ್ನು ಹಂಚಿಕೊಳ್ಳುವಂತಹ ವೇದಿಕೆಗಳು ಹುಟ್ಟಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ಇಂದು ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟತೆ ತಾಂಡವವಾಡುತ್ತಿದೆ. ಮೌಲ್ಯಗಳ ಅಧಃಪತನದಿಂದ ಸಮಾಜದ ಸ್ವಾಸ್ಥ್ಯ ಕದಡಿದೆ. ಆದ್ದರಿಂದ, ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನದ ಅನಿವಾರ್ಯತೆ ಇದೆ. ಹಿರಿಯರು ತಮ್ಮ ಅನುಭವಗಳನ್ನು ಧಾರೆ ಎರೆಯುವ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಅವರು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.