ADVERTISEMENT

₹ 10 ಲಕ್ಷದೊಂದಿಗೆ ವ್ಯವಸ್ಥಾಪಕಿ ಪರಾರಿ?

ಜೀವ ವಿಮೆ ಮಾಡಿಸುವ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:24 IST
Last Updated 25 ನವೆಂಬರ್ 2015, 20:24 IST

ಬೆಂಗಳೂರು: ಜೀವ ವಿಮೆ ಮಾಡಿಸಿಕೊಡುವುದಾಗಿ ಗ್ರಾಹಕರಿಂದ ₹ 10 ಲಕ್ಷ ಪಡೆದು ಪರಾರಿಯಾದ ಆರೋಪದ ಮೇಲೆ ಎಚ್‌ಡಿಎಫ್‌ಸಿ ಜೀವ ವಿಮಾ ಕಂಪೆನಿಯ ವ್ಯವಸ್ಥಾಪಕಿ ವಿಶಾಲಾಕ್ಷಿ ಎಂಬುವರ ವಿರುದ್ಧ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅಂದಿನಿಂದ ವಿಶಾಲಾಕ್ಷಿ ಮನೆಗೂ ಹೋಗಿಲ್ಲ. ಅವರು ಎಲ್ಲಿದ್ದಾರೆ ಎಂಬುದು ಕುಟುಂಬ ಸದಸ್ಯರಿಗೂ ಗೊತ್ತಾಗಿಲ್ಲ. ಮೊಬೈಲ್‌ ಕೂಡ ಸ್ವಿಚ್ ಆಫ್ ಆಗಿದ್ದು, ಐಎಂಇಐ ಸಂಖ್ಯೆ ಆಧರಿಸಿ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

‘ಹಣ ಕೊಟ್ಟು 15 ದಿನಗಳಾದರೂ ವಿಮೆ ಪ್ರಕ್ರಿಯೆಯಲ್ಲಿ ಪ್ರಗತಿ ಕಾಣದಿದ್ದಾಗ ಫಿರ್ಯಾದಿಯು ವಿಶಾಲಕ್ಷ್ಮಿ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಬಗ್ಗೆ ವಿಚಾರಿಸಲು ಕಂಪೆನಿಗೆ ತೆರಳಿದಾಗ ವಿಶಾಲಕ್ಷಿ 15 ದಿನಗಳಿಂದ ಕೆಲಸಕ್ಕೇ ಬಂದಿಲ್ಲ ಹಾಗೂ ತಾನು ಕೊಟ್ಟ ಹಣ ಕೂಡ ಕಂಪೆನಿಯನ್ನು ತಲುಪಿಲ್ಲ ಎಂಬುದು ಶ್ರೀನಿವಾಸ್‌ಗೆ ಗೊತ್ತಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಸೇಪಟ್ ಕಟೋಚ್ ತಿಳಿಸಿದರು.

ಇದೇ ವಿಶಾಲಾಕ್ಷಿ ಈ ಹಿಂದೆ ಶಿರಸಿಯ ಅಪರ್ಣ ಹಂಸ ಎಂಬುವರಿಗೂ ₹ 36 ಲಕ್ಷ ವಂಚಿಸಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಅವರ ವಿರುದ್ಧ ವಂಚನೆ (ಐಪಿಸಿ 420) ಹಾಗೂ ನಂಬಿಕೆ ದ್ರೋಹ (ಐಪಿಸಿ 406) ಆರೋಪದಡಿ  ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.