ADVERTISEMENT

12 ಮೆಟ್ರೊ ನಿಲ್ದಾಣಗಳಲ್ಲಿ ಉಬರ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:42 IST
Last Updated 24 ಮಾರ್ಚ್ 2017, 20:42 IST
12 ಮೆಟ್ರೊ ನಿಲ್ದಾಣಗಳಲ್ಲಿ ಉಬರ್‌
12 ಮೆಟ್ರೊ ನಿಲ್ದಾಣಗಳಲ್ಲಿ ಉಬರ್‌   

ಬೆಂಗಳೂರು: ನಗರದ 12 ‘ನಮ್ಮ ಮೆಟ್ರೊ’ ನಿಲ್ದಾಣಗಳಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಕುರಿತು  ಉಬರ್‌ ಸಂಸ್ಥೆ ಶುಕ್ರವಾರ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಜತೆ ಒಪ್ಪಂದ ಮಾಡಿಕೊಂಡಿತು.

ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಉಬರ್ ಸಂಸ್ಥೆಯು ಎರಡು ಪ್ರತ್ಯೇಕ ಕೌಂಟರ್‌ಗಳನ್ನು ಆರಂಭಿಸಿದೆ. ಪ್ರಯಾಣಿಕರು ಮೊಬೈಲ್‌ ಬಳಸದೆಯೂ  ಇಲ್ಲಿ ಟ್ಯಾಕ್ಸಿ ಬುಕ್‌ ಮಾಡಬಹುದು.

‘ಪ್ರಯಾಣದ ಅವಧಿ ಕಡಿಮೆ ಮಾಡಲು ಬಿಎಂಆರ್‌ಸಿಎಲ್‌ ಜೊತೆ  ಉಬರ್‌ ಕೈಜೋಡಿಸಲಿದೆ. ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕೂ ಇದರಿಂದ ಅನುಕೂಲವಾಗಲಿದೆ. ಮೆಟ್ರೊ ನಿಲ್ದಾಣಗಳ ಬಳಿಯ ವಾಹನ ನಿಲುಗಡೆ ತಾಣಗಳ ಮೇಲಿನ ಒತ್ತಡವೂ ಕಡಿಮೆ ಆಗಲಿದೆ’ ಎಂದು ಉಬರ್‌ ಸಂಸ್ಥೆಯ   ಬೆಂಗಳೂರು ನಗರ ಘಟಕದ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿಯಾನ್‌ ಫ್ರೀಸ್‌ ತಿಳಿಸಿದರು.

ADVERTISEMENT

ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಮೈಸೂರು ರಸ್ತೆ, ವಿಜಯನಗರ,  ಹೊಸಹಳ್ಳಿ, ಮೆಜೆಸ್ಟಿಕ್‌, ಸೆಂಟ್ರಲ್‌ ಕಾಲೇಜು,   ಎಂ.ಜಿ.ರಸ್ತೆ, ಇಂದಿರಾನಗರ ನಿಲ್ದಾಣಗಳಲ್ಲಿ ಹಾಗೂ ಉತ್ತರ –ದಕ್ಷಿಣ ಕಾರಿಡಾರ್‌ನಲ್ಲಿ  ಸಂಪಿಗೆ ರಸ್ತೆ (ಮಂತ್ರಿ ಮಾಲ್‌),  ಸೋಪ್‌ ಫ್ಯಾಕ್ಟರಿ  (ಒರಾಯನ್‌ ಮಾಲ್‌), ಜಾಲಹಳ್ಳಿ, ದಾಸರಹಳ್ಳಿ ನಿಲ್ದಾಣಗಳಲ್ಲಿ ಉಬರ್‌ ಕಿಯೋಸ್ಕ್‌ ಸೇವೆ ಲಭ್ಯ.

ಏಳು ಮೆಟ್ರೊ ನಿಲ್ದಾಣಗಳಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಓಲಾ ಸಂಸ್ಥೆ ಜೊತೆ ಬಿಎಂಆರ್‌ಸಿಎಲ್‌  ಫೆಬ್ರುವರಿಯಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ಬಸ್‌ ಸಂಪರ್ಕ ಹೆಚ್ಚಳ ಶೀಘ್ರ: ‘ಬಹುತೇಕ ಎಲ್ಲ ಮೆಟ್ರೊ ನಿಲ್ದಾಣಗಳಿಗೂ ಬಿಎಂಟಿಸಿ ಬಸ್‌ ಸಂಪರ್ಕ ಒದಗಿಸಿದ್ದೇವೆ.  500 ಬಸ್‌ಗಳನ್ನು ಶೀಘ್ರವೇಖರೀದಿಸಲಿದ್ದೇವೆ. ಮೂರು ತಿಂಗಳ ಒಳಗೆ ಮೆಟ್ರೊ ನಿಲ್ದಾಣಗಳಿಗೆ ಬಸ್‌ ಸಂಪರ್ಕವನ್ನು  ಹೆಚ್ಚಿಸಲಿದ್ದೇವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ   ಏಕರೂಪ್‌ ಕೌರ್‌  ತಿಳಿಸಿದರು.

‘ಈಗಿನ ಪರಿಸ್ಥಿತಿಯಲ್ಲಿ ಸರ್ಕಾರದ ನೆರವಿಲ್ಲದೆ ಪ್ರಯಾಣ ದರ ಇಳಿಸಲು ಸಾಧ್ಯವಿಲ್ಲ.  ಆದರೂ, ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಕಲ್ಪಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ. ಬಿಎಂಟಿಸಿ ಆ್ಯಪ್‌ ಬಳಸಿ ಅವರು ಬಸ್‌ ಎಷ್ಟು ಹೊತ್ತಿಗೆ ಬರಲಿದೆ  ಎಂಬ ಬಗ್ಗೆ ಖಚಿತ ಮಾಹಿತಿ ಪಡೆಯಬಹುದು.  ಪ್ರಯಾಣದ ಸಮಯವನ್ನು ಹೊಂದಿಸಿಕೊಳ್ಳಲು ಇದು  ನೆರವಾಗಲಿದೆ’ ಎಂದರು.

ಬಸ್‌ ನಿಲುಗಡೆಗೆ ಜಾಗದ ಕೊರತೆ
‘ನಮ್ಮ ಮೆಟ್ರೊ ನಿಲ್ದಾಣಗಳಿಗೆ  ಬಸ್‌ ಸಂಪರ್ಕ ಹೆಚ್ಚಿಸಲು ಬಿಎಂಟಿಸಿ ಸಿದ್ಧವಿದೆ. ಆದರೆ, ಹೆಚ್ಚಿನ ಮೆಟ್ರೊ ನಿಲ್ದಾಣಗಳಲ್ಲಿ ಬಸ್‌ ನಿಲುಗಡೆಗೆ ಜಾಗದ ಕೊರತೆ ಇದೆ. ವಿವಿಧ ಮಾರ್ಗಗಳಿಗೆ ಬಸ್‌ ಸಂಪರ್ಕ ಕಲ್ಪಿಸಬೇಕಾದರೆ ಮೆಟ್ರೊ ನಿಲ್ದಾಣದಲ್ಲಿ  ಐದು ಬಸ್‌ಗಳನ್ನು ನಿಲ್ಲಿಸುವಷ್ಟಾದರೂ ಸ್ಥಳಾವಕಾಶ ಬೇಕು. ವಿವೇಕಾನಂದ ಮೆಟ್ರೊ ನಿಲ್ದಾಣದಲ್ಲಿ ಮಾತ್ರ ಈ ಸೌಲಭ್ಯ ಇದೆ’ ಎಂದು  ಏಕ್‌ರೂಪ್‌ ಕೌರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.