ADVERTISEMENT

₹ 1,662 ಕೋಟಿ ಮೊತ್ತದ ಟೆಂಡರ್‌ಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:42 IST
Last Updated 19 ಜುಲೈ 2017, 19:42 IST
₹ 1,662 ಕೋಟಿ ಮೊತ್ತದ ಟೆಂಡರ್‌ಗೆ ಒಪ್ಪಿಗೆ
₹ 1,662 ಕೋಟಿ ಮೊತ್ತದ ಟೆಂಡರ್‌ಗೆ ಒಪ್ಪಿಗೆ   

ಬೆಂಗಳೂರು: ಮೂರು ಕಣಿವೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರು ಸಂಸ್ಕರಣೆಗೆ ಘಟಕ ಸ್ಥಾಪಿಸಿ, 10 ವರ್ಷ ನಿರ್ವಹಣೆ ಮಾಡುವ ₹1,662 ಕೋಟಿ ಮೊತ್ತದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಸಂಪುಟ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ‘ಈ ಯೋಜನೆಗಳ ಅನುಷ್ಠಾನಕ್ಕೆ ಮೂರು ಬಾರಿ ಟೆಂಡರ್  ಕರೆಯಲಾಗಿತ್ತು. ಯಾರೊಬ್ಬರೂ ಪಾಲ್ಗೊಂಡಿರಲಿಲ್ಲ. ಈ ಬಾರಿ ಪಾಲ್ಗೊಂಡಿದ್ದ ಗುತ್ತಿಗೆದಾರರನ್ನು ಅಂತಿಮಗೊಳಿಸಲು ಸಭೆ ಒಪ್ಪಿಗೆ ಸೂಚಿಸಿತು’ ಎಂದರು.

ಇಲ್ಲಿ ಸಂಸ್ಕರಿಸಲಾಗುವ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ  ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಕೋರಮಂಗಲ– ಚಲ್ಲಘಟ್ಟ ಕಣಿವೆಯಿಂದ ಸಂಸ್ಕರಿಸುವ ನೀರನ್ನು ಕೋಲಾರ ಜಿಲ್ಲೆ  ನರಸಾಪುರ ಕೈಗಾರಿಕೆ ಪ್ರದೇಶಕ್ಕೆ ಪೂರೈಸುವ ಯೋಜನೆ ಇದೇ ವರ್ಷದ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ ಎಂದೂ ಅವರು ಹೇಳಿದರು.

ಹೆಸರಘಟ್ಟ ಸಂಸ್ಕರಣಾ ಘಟಕ: ಹೆಸರಘಟ್ಟ– ತಿಪ್ಪಗೊಂಡನಹಳ್ಳಿ ಜಲಾಶಯದ ಮಧ್ಯೆ ಇರುವ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಸಂಸ್ಕರಿಸುವ ₹ 37.28 ಕೋಟಿ ಮೊತ್ತದ ಯೋಜನೆಗೂ ಸರ್ಕಾರ  ಸಮ್ಮತಿ ಸೂಚಿಸಿದೆ.

ಭೂಮಿ ಬ್ಯಾಂಕ್‌: ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಂಡ, ರಕ್ಷಣಾ ಇಲಾಖೆಗೆ ಸೇರಿದ ಭೂಮಿಗೆ ಪರ್ಯಾಯವಾಗಿ ಭೂಮಿ ನೀಡಲು ‘ಭೂಮಿ ಬ್ಯಾಂಕ್‌’ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ.

ಈ ಬ್ಯಾಂಕ್‌ ಮೇಲುಸ್ತುವಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ, ಕಂದಾಯ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಇರುವ ಸಮಿತಿ ರಚಿಸಲಾಗುತ್ತದೆ. ಪರ್ಯಾಯ ಭೂಮಿಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸುವ ಅಧಿಕಾರವನ್ನು  ಈ ಸಮಿತಿಗೆ  ನೀಡಲಾಗಿದೆ.

‘ನಮ್ಮ ಮೆಟ್ರೊ’ ನಿಲ್ದಾಣಗಳನ್ನು ಬಳಸಿಕೊಂಡು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ₹ 37.32 ಕೋಟಿ ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ರಾಜ್ಯ ಹಾಗೂ ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳ ಮಾಹಿತಿಯನ್ನು ಮೆಟ್ರೊ ನಿಲ್ದಾಣದ ಒಳಗೆ ನೀಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಈ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ ಜಂಟಿಯಾಗಿ ಅನುಷ್ಠಾನ ಮಾಡಲಿವೆ.

379 ಎಕರೆ ಕೆರೆ, ಗೋಮಾಳ ಭೂಮಿ ಬಿಡಿಎಗೆ
ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆ ವ್ಯಾಪ್ತಿಯಲ್ಲಿನ  ಕೆರೆ, ಕೆರೆ ಅಂಗಳ, ಬಿ ಖರಾಬು, ಗೋಮಾಳ ಒಳಗೊಂಡ 379 ಎಕರೆ
22 ಗುಂಟೆ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಉಚಿತವಾಗಿ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಕೆರೆ, ಕೆರೆ ಅಂಗಳ, ಕಟ್ಟೆ, ಜಲಕಾಯ, ಬಿ ಖರಾಬು ಸೇರಿದಂತೆ 197 ಎಕರೆ 09 ಗುಂಟೆ ಹಾಗೂ 182 ಎಕರೆ 13 ಗುಂಟೆ ಗೋಮಾಳ ಭೂಮಿ
ಯನ್ನು ಬಿಡಿಎಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಇವೆಲ್ಲವನ್ನೂ ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಅಭಿವೃದ್ಧಿ ಪಡಿಸಬೇಕೇ ವಿನಾ ಅನ್ಯ ಉದ್ದೇಶಕ್ಕೆ ಬಳಸಬಾರದು ಎಂಬ ಷರತ್ತು ವಿಧಿಸಿ ಈ ಭೂಮಿಯನ್ನು ನೀಡಲಾಗುತ್ತಿದೆ ಎಂದರು.

‘ಗೋಮಾಳವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ. ಈ ಎಲ್ಲ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕೆ ಬಳಸಿಕೊಳ್ಳುವುದಿಲ್ಲವೇ’ ಎಂದು
ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ,  ‘ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು  ಎಂದು ಸೂಚಿಸಲಾಗಿದೆ’ ಎಂದಷ್ಟೇ ಸಚಿವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.