ADVERTISEMENT

‘2018ರ ಡಿಸೆಂಬರ್‌ಗೆ ಸಂಚಾರ ಆರಂಭ’

ಯೆಲಚೇನಹಳ್ಳಿ– ಅಂಜನಾಪುರ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:31 IST
Last Updated 22 ಸೆಪ್ಟೆಂಬರ್ 2017, 19:31 IST
ಅಂಜನಾಪುರ ಅಡ್ಡರಸ್ತೆ ಮೆಟ್ರೊ ನಿಲ್ದಾಣದ ಕಾಮಗಾರಿ ಬಗ್ಗೆ ಪ್ರದೀಪ್‌ ಸಿಂಗ್‌ ಖರೋಲ ಅವರು ಕೆ.ಜೆ.ಜಾರ್ಜ್‌ ಅವರಿಗೆ ವಿವರಿಸಿದರು. –ಪ್ರಜಾವಾಣಿ ಚಿತ್ರ
ಅಂಜನಾಪುರ ಅಡ್ಡರಸ್ತೆ ಮೆಟ್ರೊ ನಿಲ್ದಾಣದ ಕಾಮಗಾರಿ ಬಗ್ಗೆ ಪ್ರದೀಪ್‌ ಸಿಂಗ್‌ ಖರೋಲ ಅವರು ಕೆ.ಜೆ.ಜಾರ್ಜ್‌ ಅವರಿಗೆ ವಿವರಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ ಎರಡನೇ ಹಂತದ ಯೆಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್‌ವರೆಗಿನ ರೀಚ್‌–4ಬಿ ಮಾರ್ಗದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, 2018ರ ಡಿಸೆಂಬರ್‌ಗೆ ರೈಲು ಸಂಚಾರ ಆರಂಭವಾಗಲಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಈ ಮಾರ್ಗದ ಕಾಮಗಾರಿ ಹಾಗೂ ತಾತಗುಣಿಯಲ್ಲಿರುವ ಕಾಸ್ಟಿಂಗ್‌ ಯಾರ್ಡ್‌ ಅನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಈ ಮಾರ್ಗದಲ್ಲಿ ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾಪಾರ್ಕ್‌, ವಜ್ರಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರ ಟೌನ್‌ಶಿಪ್‌ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಮುಂದಿನ ಮಾರ್ಚ್‌ ವೇಳೆಗೆ ಸಿವಿಲ್‌ ಕೆಲಸಗಳು ಪೂರ್ಣಗೊಳ್ಳಲಿವೆ. ಬಳಿಕ, ಹಳಿಗಳ ಅಳವಡಿಕೆ ಕಾರ್ಯ ನಡೆಯಲಿದೆ’ ಎಂದರು.

ADVERTISEMENT

‘ಮೆಟ್ರೊ ರೈಲು ನಿಲ್ದಾಣಗಳಿಗೆ ಬೇಕಾದ ಗೋಡೆ, ವಯಾಡಕ್ಟ್‌ಗಳನ್ನು ಕಾಸ್ಟಿಂಗ್‌ ಯಾರ್ಡ್‌ನಲ್ಲೇ ಸಿದ್ಧಪಡಿಸಲಾಗುತ್ತದೆ. ಇವುಗಳನ್ನು ಮಾರ್ಗ ನಿರ್ಮಾಣದ ಸ್ಥಳಕ್ಕೆ ಕೊಂಡೊಯ್ದು ಜೋಡಿಸಲಾಗುತ್ತದೆ. ಪ್ರಿ–ಕಾಸ್ಟಿಂಗ್‌ ತಂತ್ರಜ್ಞಾನದಿಂದಾಗಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ’ ಎಂದು ತಿಳಿಸಿದರು.

‘ಅಂಜನಾಪುರ ಟೌನ್‌ಶಿಪ್‌ ನಿಲ್ದಾಣದ ಬಳಿ ಡಿಪೊ ನಿರ್ಮಿಸಲು ಅರಣ್ಯ ಭೂಮಿ ಬೇಕಿತ್ತು. ಈ ಪ್ರದೇಶದಲ್ಲೇ ಆನೆ ಕಾರಿಡಾರ್‌ ಬರುವುದರಿಂದ ಭೂಮಿ ನೀಡಲು ಅರಣ್ಯ ಇಲಾಖೆ ನಿರಾಕರಿಸಿತ್ತು. ಅರಣ್ಯದಂಚಿನಲ್ಲಿ ಎರಡು ಎಕರೆ ಖಾಸಗಿ ಭೂಮಿ ಇದೆ. ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಡಿಪೊ ನಿರ್ಮಾಣ ಮಾಡುತ್ತೇವೆ’ ಎಂದು ಹೇಳಿದರು.

ತಿಂಗಳಾಂತ್ಯದಲ್ಲಿ ಟೆಂಡರ್‌: ‘ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ನಾಗವಾರ–ಗೊಟ್ಟಿಗೆರೆ ಮಾರ್ಗಕ್ಕೆ (ರೀಚ್‌ –6) ತಿಂಗಳಾಂತ್ಯದಲ್ಲಿ ಟೆಂಡರ್‌ ನೀಡಲಿದ್ದೇವೆ. ಇದರ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗಿನ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಈ ವರದಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಿಸುತ್ತೇವೆ. ಈ ಯೋಜನೆಗೆ ಹಣಕಾಸು ಒದಗಿಸುವ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

‘ಕೆ.ಆರ್‌.ಪುರದಿಂದ ಸಿಲ್ಕ್‌ ಬೋರ್ಡ್‌ವರೆಗೆ ಮಾರ್ಗವನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿನ ನಿಲ್ದಾಣಗಳನ್ನು ದತ್ತು ತೆಗೆದುಕೊಳ್ಳಲು ಎಂಬೆಸಿ, ಬಾಗ್ಮನೆ ಕಂಪೆನಿಗಳು ಒಪ್ಪಿಗೆ ಸೂಚಿಸಿವೆ. ಪ್ರೆಸ್ಟೀಜ್‌ ಹಾಗೂ ಆರ್‌ಎಂಜಡ್‌ ಕಂಪೆನಿಗಳ ಜತೆ ಮಾತುಕತೆ ನಡೆಯುತ್ತಿದೆ. ಆರ್‌.ವಿ.ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರವರೆಗಿನ (ಎಲೆಕ್ಟ್ರಾನಿಕ್‌ ಸಿಟಿ) ಮಾರ್ಗದ ನಿಲ್ದಾಣಗಳನ್ನು ದತ್ತು ಪಡೆಯಲು ಇನ್ಫೊಸಿಸ್‌ ಹಾಗೂ ಬಯೋಕಾನ್‌ ಕಂಪೆನಿಗಳು ಒಪ್ಪಿವೆ’ ಎಂದು ವಿವರಿಸಿದರು.

‘ಬಿಬಿಎಂಪಿಯಲ್ಲಿ ₹22 ಸಾವಿರ ಕೋಟಿ ಅಕ್ರಮ ನಡೆದಿದೆ ಎಂದು ಜೆಡಿಎಸ್‌ನವರು ಆರೋಪ ಮಾಡಿದ್ದಾರೆ. ನಿರ್ದಿಷ್ಟ ಪ್ರಕರಣ ಇದ್ದರೆ ಹೇಳಲಿ. ಅದರ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘15 ನಿಲ್ದಾಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ’
‘ಎರಡನೇ ಹಂತದಲ್ಲಿ ಒಟ್ಟು 60 ಮೆಟ್ರೊ ರೈಲು ನಿಲ್ದಾಣಗಳಿವೆ. ಇದರಲ್ಲಿ 15 ನಿಲ್ದಾಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಣ್ಣ ನಿಲ್ದಾಣಗಳಲ್ಲಿ ಸುತ್ತಲೂ ಸರ್ವಿಸ್‌ ರಸ್ತೆ ಮಾಡುತ್ತಿದ್ದೇವೆ. ನಿಲ್ದಾಣಕ್ಕೆ ಬರುವ ಹಾಗೂ ಹೋಗುವ ಪ್ರಯಾಣಿಕರು ಸರ್ವಿಸ್‌ ರಸ್ತೆಯನ್ನು ಬಳಸಲಿದ್ದಾರೆ. ಇದರಿಂದ ಮುಖ್ಯರಸ್ತೆಯ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆ ಆಗುವುದಿಲ್ಲ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ತಿಳಿಸಿದರು.

‘ಕೆಲವೆಡೆ ಪಾರ್ಕಿಂಗ್‌ಗೆ ಜಾಗದ ಸಮಸ್ಯೆ ಇದೆ. ಬಿಬಿಎಂಪಿ ಜತೆ ಮಾತುಕತೆ ನಡೆಸಿ, ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಮೈಲಸಂದ್ರದಲ್ಲಿ ಬಹುಹಂತದ ಪಾರ್ಕಿಂಗ್‌ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ’ ಎಂದರು.

‘ನಿಗಮದಲ್ಲಿ ಒಟ್ಟು 50 ರೈಲುಗಳಿದ್ದು, ಮೂರು ಬೋಗಿಗಳನ್ನು ಹೊಂದಿವೆ. ದಟ್ಟಣೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬೋಗಿಗಳ ಸಂಖ್ಯೆಯನ್ನು 6ಕ್ಕೆ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ 150 ಬೋಗಿಗಳನ್ನು ತಯಾರಿಸಲು ಬೆಮೆಲ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಡಿಸೆಂಬರ್‌ನಲ್ಲಿ ಒಂದು ರೈಲು ಆರು ಬೋಗಿಗಳನ್ನು ಹೊಂದಲಿದೆ. ಮುಂದಿನ ವರ್ಷಾಂತ್ಯಕ್ಕೆ ಎಲ್ಲ ರೈಲುಗಳೂ ಆರು ಬೋಗಿಗಳನ್ನು ಹೊಂದಲಿವೆ’ ಎಂದು ತಿಳಿಸಿದರು.

‘ಕೆಳಸೇತುವೆ ನಿರ್ಮಿಸಿ’
‘ವಸಂತಪುರದಿಂದ ಕೋಣನಕುಂಟೆ ಕ್ರಾಸ್‌ ಮೂಲಕ ಅಂಜನಾಪುರಕ್ಕೆ ಹೋಗಬೇಕು. ಈ ಮಾರ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಇಲ್ಲಿ ಕೆಳಸೇತುವೆ ನಿರ್ಮಿಸುವ ಮೂಲಕ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಶಾಸಕ ಕೃಷ್ಣಪ್ಪ ಮನವಿ ಮಾಡಿದರು.

‘ಬಿಡಿಎ ನಿರ್ಮಿಸಿರುವ ಅಂಜನಾಪುರ ಬಡಾವಣೆಯಲ್ಲಿ ಮೂಲಸೌಕರ್ಯಗಳು ಇಲ್ಲ. ಅಗತ್ಯ ಸೌಲಭ್ಯ ಕಲ್ಪಿಸಲು ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದೂ ಒತ್ತಾಯಿಸಿದರು.

*
ಮೇಯರ್‌ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ.
– ಕೆ.ಜೆ.ಜಾರ್ಜ್‌, ಬೆಂಗಳೂರು ಅಭಿವೃದ್ಧಿ ಸಚಿವ

*
ಅಂಕಿ–ಅಂಶ
* ₹508.86 ಕೋಟಿ –ಈ ಯೋಜನೆಯ ಒಟ್ಟು ವೆಚ್ಚ
*6.52 ಕಿ.ಮೀ.– ಯೆಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್‌ವರೆಗೆ ಇರುವ ದೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.