ADVERTISEMENT

3 ತಿಂಗಳಲ್ಲಿ ಅರ್ಜಿ ಪರಿಶೀಲಿಸಲು ಆದೇಶ

ಮಾಲ್‌, ಹೋಟೆಲ್‌ಗಳಿಂದ ರಾಜ ಕಾಲುವೆ ಒತ್ತುವರಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:47 IST
Last Updated 29 ಆಗಸ್ಟ್ 2016, 19:47 IST

ಬೆಂಗಳೂರು: ನಗರದಲ್ಲಿ ಕೆಲ ಮಾಲ್‌ಗಳು ಹಾಗೂ ಹೋಟೆಲ್‌ಗಳು ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ  ಸಲ್ಲಿಸಲಾಗುವ ಅರ್ಜಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರು ಮೂರು ತಿಂಗಳಲ್ಲಿ ವಿಲೇವಾರಿ ಮಾಡಬೇಕು  ಎಂದು ಹೈಕೋರ್ಟ್‌  ಆದೇಶಿಸಿದೆ.

ಈ ಸಂಬಂಧ ‘ಸಮರ್ಪಣಾ’ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಲೇವಾರಿ ಮಾಡಿತು.

ಅರ್ಜಿದಾರರ ಪರ ವಕೀಲ ಜಿ.ಆರ್‌.ಮೋಹನ್, ‘ಬ್ರಿಗೇಡ್‌ ಎಂಟರ್‌ ಪ್ರೈಸಸ್‌  ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ 3 ಎಕರೆ 8 ಗುಂಟೆ ಸರ್ಕಾರಿ ಖರಾಬು ಜಮೀನನ್ನು ಒತ್ತುವರಿ ಮಾಡಿದೆ. ಜಿಸ್ಟಾಡ್‌ ಹೋಟೆಲ್ಸ್‌ ಲಿಮಿಟೆಡ್‌ನವರು ವಿಠಲ್‌ ಮಲ್ಯ ರಸ್ತೆಯಲ್ಲಿ ರಾಜಕಾಲುವೆಯ 22 ಗುಂಟೆ ಜಾಗವನ್ನು ಒತ್ತುವರಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಇಟಿಎ ಕರ್ನಾಟಕ ಎಸ್ಟೇಟ್ಸ್‌ ಲಿಮಿಟೆಡ್‌ನವರು ಮಾಗಡಿ ರಸ್ತೆಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿ ಹೋಟೆಲ್ ಮಾಲ್‌ ನಿರ್ಮಿಸಿದ್ದಾರೆ.  ಈ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.

‘ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆಗಳನ್ನು ಕಳೆದುಕೊಂಡ ಬಡ ಮತ್ತು ಮಧ್ಯಮ ವರ್ಗದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪರಿಹಾರವನ್ನೂ ನೀಡಬೇಕು’ ಎಂದು ಮೋಹನ್‌ ಇದೇ ವೇಳೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

‘ಅರ್ಜಿದಾರರು ಬಿಬಿಎಂಪಿ ಆಯುಕ್ತರಿಗೆ 15 ದಿನಗಳ ಒಳಗೆ ಮನವಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ದಿನದಿಂದ ಮೂರು ತಿಂಗಳಿನ ಒಳಗೆ ಇದನ್ನು ವಿಲೇವಾರಿ ಮಾಡಬೇಕು’ ಎಂದು ನ್ಯಾಯಪೀಠವು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿತು.

ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಓರಾಯನ್‌  ಮಾಲ್‌), ಜಿಸ್ಟಾಡ್‌ ಹೋಟೆಲ್ಸ್‌ ಲಿಮಿಟೆಡ್‌ ಮತ್ತು ಇಟಿಎ ಕರ್ನಾಟಕ ಎಸ್ಟೇಟ್ಸ್‌ ಲಿಮಿಟೆಡ್‌ (ಇಟಿಎ ಮಾಲ್‌ ಬಿನ್ನಿಪೇಟೆ), ಜೆಡಬ್ಲ್ಯೂ ಮ್ಯಾರಿಯೆಟ್‌ ಹೋಟೆಲ್‌ಗಳು ರಾಜಕಾಲುವೆ ಒತ್ತುವರಿ ಮಾಡಿವೆ ಎಂಬುದು ಅರ್ಜಿದಾರರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.