ADVERTISEMENT

496 ಎಕರೆ ಜಿಲ್ಲಾಡಳಿತದ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 20:26 IST
Last Updated 24 ಮೇ 2017, 20:26 IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತವು  ಯಲಹಂಕ ತಾಲ್ಲೂಕಿನ ಜಾಲ ಹೋಬಳಿಯ ಚಲಮಕುಂಟೆ ಗ್ರಾಮದಲ್ಲಿ  ಬುಧವಾರ 494 ಎಕರೆ 24 ಗುಂಟೆ ಜಾಗವನ್ನು ಸ್ವಾಧೀನಕ್ಕೆ ಪಡೆದಿದೆ.

ಈ ಜಾಗದ ಮೌಲ್ಯ ₹1,500 ಕೋಟಿ ಎಂದು ಅಂದಾಜಿಸಲಾಗಿದೆ. ಜೋಡಿದಾರ ಗ್ರಾಮವಾದ  ಚಲಮಕುಂಟೆಯ ಈ ಜಾಗದ ಮಾಲೀಕತ್ವದ ಬಗ್ಗೆ ವಿವಾದವಿತ್ತು. ಎಚ್‌.ಕೆಂಪಯ್ಯ ಸೇರಿದಂತೆ 10 ಮಂದಿ ಈ ಜಾಗ ತಮಗೆ ಸೇರಿದ್ದು ಎಂದು ವಾದಿಸುತ್ತಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಅವರ ನ್ಯಾಯಾಲಯವು, ‘ಅರ್ಜಿದಾರರ ಪೈಕಿ ಕೆಂಪಯ್ಯ ಅವರಿಗೆ ಮಾತ್ರ  ಜಾಗದ ಹಕ್ಕು ಇದೆ. ಉಳಿದ ಅರ್ಜಿದಾರರು ಈ ಜಾಗದ ಮೇಲೆ ಯಾವುದೇ ಹಕ್ಕು ಹೊಂದಿಲ್ಲ’ ಎಂದು  ಸೋಮವಾರ  ಆದೇಶ ಹೊರಡಿಸಿತ್ತು.

ಜಿಲ್ಲಾಧಿಕಾರಿ ವಿ.ಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕಾಂತರಾಜು, ಉಪವಿಭಾಗಾಧಿಕಾರಿ ಕೆ.ರಂಗನಾಥ್‌ ನೇತೃತ್ವದಲ್ಲಿ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಲಾಯಿತು.

‘ಕೆ.ಪಿ.ರಾಮಯ್ಯ  ಈ ಗ್ರಾಮಕ್ಕೆ ಜೋಡಿದಾರರಾಗಿದ್ದರು. ಅವರು 1956ರಲ್ಲಿ ಕಾವೇರಿ ರೆಡ್ಡಿ ಎಂಬುವವರಿಗೆ ಇಡೀ ಗ್ರಾಮವನ್ನು ಮಾರಾಟ ಮಾಡಿದ್ದರು. ಅವರಿಂದ   ಕೆಂಪಯ್ಯ ಅವರು 1956ರಲ್ಲೇ ಜಾಗವನ್ನು ಖರೀದಿಸಿದ್ದರು. 1973ರಿಂದಲೂ ಈ ಜಾಗಕ್ಕೆ ಸಂಬಂಧಿಸಿದ ವ್ಯಾಜ್ಯದ ವಿಚಾರಣೆ  ನಡೆಯುತ್ತಿತ್ತು’ ಎಂದು ವಿ.ಶಂಕರ್‌ ಮಾಹಿತಿ ನೀಡಿದರು.

‘ಜೋಡಿದಾರ ಗ್ರಾಮದಲ್ಲಿ 1959ಕ್ಕಿಂತ ಮುಂಚೆ  ಜಾಗ ಖರೀದಿಸಿದವರಿಗೆ ಮಾತ್ರ ಅದರ ಹಕ್ಕು ಲಭಿಸುತ್ತದೆ. 1964ರ ಇನಾಂ ರದ್ದತಿ ಕಾಯ್ದೆ ಪ್ರಕಾರ ಕೆಂಪಯ್ಯ ಅವರು ಮಾತ್ರ ಈ ಜಾಗದ ಮಾಲೀಕತ್ವ ಹೊಂದುವ ಅರ್ಹತೆ ಹೊಂದಿದ್ದಾರೆ. ಆದರೆ, ಅವರು ಗರಿಷ್ಠ 54 ಎಕರೆಯಷ್ಟು ಜಾಗವನ್ನಷ್ಟೇ ಹೊಂದಬಹುದು. ಹಾಗಾಗಿ ಅವರು ಬೇರೆ ಕಡೆ ಎಷ್ಟು ಜಾಗವನ್ನು ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಿ, ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಅವರಿಗೆ ಸೇರಬೇಕಾದಷ್ಟು ಜಾಗವನ್ನು ಬಿಟ್ಟುಕೊಡುತ್ತೇವೆ’ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT