ADVERTISEMENT

‘ಪಿಂಕಥಾನ್‌ ಮ್ಯಾರಥಾನ್‌’ ಫೆ.18ರಂದು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
‘ಪಿಂಕಥಾನ್‌ ಮ್ಯಾರಥಾನ್‌’ ಫೆ.18ರಂದು
‘ಪಿಂಕಥಾನ್‌ ಮ್ಯಾರಥಾನ್‌’ ಫೆ.18ರಂದು   

ಬೆಂಗಳೂರು: ಮಹಿಳೆಯರಲ್ಲಿ ಕ್ಯಾನ್ಸರ್‌ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ‘ಕಲರ್ಸ್‌ ಪಿಂಕಥಾನ್‌’ ಮ್ಯಾರಥಾನ್‌ನ ಆರನೇ ಆವೃತ್ತಿ ಫೆಬ್ರುವರಿ 18ರಂದು ನಗರದಲ್ಲಿ ನಡೆಯಲಿದೆ ಎಂದು, ಬಾಲಿವುಡ್‌ ನಟ ಸೂಪರ್‌ ಮಾಡೆಲ್‌ ಮಿಲಿಂದ್‌ ಸೋಮನ್‌ ಮಂಗಳವಾರ ಪ್ರಕಟಿಸಿದರು.

‘ಪಿಂಕಥಾನ್‌’ನ ಪ್ರೇರಣಾ ಪಾಲುದಾರರೂ ಆಗಿರುವ ಮಿಲಿಂದ್‌, ಬೆಂಗಳೂರಿನಲ್ಲಿ ಮ್ಯಾರಥಾನ್‌ಗೆ ಸಿಗುತ್ತಿರುವ ಬೆಂಬಲ ಮತ್ತು ಪ್ರಾಯೋಜಕರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ಬಾರಿ 10ಸಾವಿರಕ್ಕೂ ಹೆಚ್ಚು ಮಂದಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಮೂಲೋದ್ದೇಶದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಗೆ ಇದು ಸಾಕ್ಷಿ. ಪ್ರತಿಯೊಬ್ಬ ನಾಗರಿಕನೂ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಮ್ಮ ದೈಹಿಕ ಮತ್ತು ಆರೋಗ್ಯದ ಕ್ಷಮತೆ ಕಾಪಾಡಿಕೊಳ್ಳುವುದೆಂದರೆ ನಮ್ಮನ್ನು ನಾವು ಗೌರವಿಸಿದಂತೆ’ ಎಂದು ಮಿಲಿಂದ್‌ ವ್ಯಾಖ್ಯಾನಿಸಿದರು.

ಜಾವೆಲಿನ್‌ ಎಸೆತದಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ, 101ರ ಹರೆಯದ ಮನ್‌ ಕೌರ್‌ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಪಂಜಾಬಿ ಹಾಡುಗಳನ್ನು ಅವರು ಹಾಡಿದರು. ಮ್ಯಾರಥಾನ್‌ ಓಟಗಾರರಾದ ಅಪೋಲೊ ಆಸ್ಪತ್ರೆಯ ಕ್ಯಾನ್ಸರ್‌ ವಿಭಾಗದ ತಜ್ಞೆ ಡಾ.ಮೋನಿಕಾ ಪನ್ಸಾರಿ, ಪ್ರಗ್ಯಾ ಪ್ರಸೂನ್‌, ಅಪರೂಪ ಗುಪ್ತಾ, ನೀತು ಸಿಂಗ್‌, ಅಂಜು ಮುದ್ಗಲ್‌ ಕದಂ, ನಾಗರತ್ನ ಭಟ್‌, ಭೂಮಿಕಾ ಪಟೇಲ್‌ ಅನುಭವಗಳನ್ನು ಹಂಚಿಕೊಂಡರು.

ADVERTISEMENT

ಇದೇ ವೇಳೆ, ‘ಪಿಂಕಥಾನ್‌’ನ ವಿವಿಧ ಪದಕಗಳನ್ನು ಬಿಡುಗಡೆ ಮಾಡಲಾಯಿತು. ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವವರಿಗೆ ವಿವಿಧ ಸ್ಥಳಗಳಲ್ಲಿ ಅಗತ್ಯ ವೈದ್ಯಕೀಯ ನೆರವು ಸಿಗಲಿದ್ದು, ತಾಯಂದಿರಿಗೆ ಸ್ತನ್ಯಪಾನ ಕೊಠಡಿಗಳೂ ಇರುತ್ತವೆ, 45 ವರ್ಷಕ್ಕೂ ಮೇಲಿನ ಓಟಗಾರರಿಗೆ ಆರೋಗ್ಯಸೇವೆಯ ಪಾಲುದಾರ ಅಪೋಲೊ ಆಸ್ಪತ್ರೆಯಲ್ಲಿ ಉಚಿತ ಮ್ಯಾಮೊಗ್ರಾಮ್‌ ಸೇವೆ ಲಭ್ಯವಿದೆ, ‘ಸಮರ್ಥನಂ’ ಸಂಸ್ಥೆಯ 90 ಮಂದಿ ದೃಷ್ಟಿದೋಷವುಳ್ಳ ಸದಸ್ಯರು ವಿವಿಧ ಓಟದ ವಿಭಾಗಗಳಲ್ಲಿ ಭಾಗವಹಿಸಿದ್ದಾರೆ. ಆ್ಯಸಿಡ್‌ ದಾಳಿಯ
ಸಂತ್ರಸ್ತೆ ಪ್ರಗ್ಯಾ ಪ್ರಸೂನ್‌ ಈ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರವಣದೋಷವುಳ್ಳ 30 ಮಹಿಳೆಯರೂ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಿಲಿಂದ್‌ ಪ್ರಕಟಿಸಿದರು.

ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಆನ್‌ಲೈನ್‌ ನೋಂದಣಿಗೆ: www.pinkathon.in ಟ್ವಿಟರ್‌: @pinkathon10k

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.